ಬೆಂಗಳೂರು: ‘ಕ್ಯಾಲೆಂಡರ್’ ಚಿತ್ರದ ಮೊದಲ ಹಾಡು ‘ನಾನ್ಯಾರೊ’ ಬಿಡುಗಡೆಗೊಂಡಿದ್ದು, ಚಿತ್ರತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಚಿತ್ರದ ಮೂಲಕ ಆದರ್ಶ ಗುಂಡುರಾಜ್ ಮೊದಲ ಬಾರಿಗೆ ನಿರ್ದೇಶಕನಾಗಿಯೂ ಹೊರಹೊಮ್ಮಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನವೀನ್ ಶಕ್ತಿ, “ಆದರ್ಶ ಗುಂಡುರಾಜ್ ಮೂಲತಃ ರಂಗಭೂಮಿಯ ಕಲಾವಿದರು. ಅವರು 5000ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಮಾಡಿದ್ದಾರೆ. ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾ. ‘ಕ್ಯಾಲೆಂಡರ್’ನಲ್ಲಿ ಎಲ್ಲರ ಮನಸ್ಸಿಗೂ ಹತ್ತಿರವಾಗುವ ಕಥೆ ಇದೆ” ಎಂದರು.
ಚಿತ್ರಕ್ಕೆ ರಮೇಶ್ ಕೊಯಿರಾ ಛಾಯಾಗ್ರಹಣ ಮಾಡಿದ್ದು, ಸುನಾದ್ ಗೌತಮ್ ಸಂಗೀತ ನಿರ್ದೇಶನ ನೀಡಿದ್ದಾರೆ. ನಾಯಕನಾಗಿ ಆದರ್ಶ ಗುಂಡುರಾಜ್ ಅಭಿನಯಿಸಿದ್ದು, ನಾಯಕಿಯರಾಗಿ ಸುಶ್ಮಿತಾ ಹಾಗೂ ನಿವಿಷ್ಕ ಪಾಟೀಲ್ ಕಾಣಿಸಿಕೊಂಡಿದ್ದಾರೆ.
ವಿಶೇಷ ಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ನಟಿಸಿದ್ದು, ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಸುಚೇಂದ್ರ ಪ್ರಸಾದ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಹಾಗೂ ಗಾಯಕಿ ಅನುಷ್ಕಾ ಮಾತನಾಡಿದರು. ನಾಯಕಿಯರಾದ ಸುಶ್ಮಿತಾ ಮತ್ತು ನಿವಿಷ್ಕ ಪಾಟೀಲ್ ತಮ್ಮ ಪಾತ್ರಗಳ ಕುರಿತು ವಿವರಿಸಿದರು. ಸದ್ಯದಲ್ಲೇ ಕ್ಯಾಲೆಂಡರ್ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.



