ಭೀಮ ಮಂದಿರ ಸ್ಥಾಪನೆಗಾಗಿ ಅಭಿಯಾನ

0
anil
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೋವಿಡ್ ಸಂದರ್ಭದಲ್ಲಿ `ಮನುಕುಲಕ್ಕಾಗಿ ಭಿಕ್ಷೆ’ ಅಭಿಯಾನದ ರೀತಿಯಲ್ಲಿಯೇ ಸಮಾನತೆಯ ಮಂದಿರ ಸ್ಥಾಪನೆಗಾಗಿ ಅಂಬೇಡ್ಕರ್ ಅವರ ಜಯಂತಿ ದಿನವಾದ ಏಪ್ರಿಲ್ 14ರಂದು ಸಂಜೆ 4 ಗಂಟೆಗೆ ತೋಂಟದಾರ್ಯ ಮಠದಿಂದ `ಸಮಾನತೆಯ ಜಾಥಾ’ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

Advertisement

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾನತೆಯ ಜಾಥಾದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಶಿಶುನಾಳ ಶರೀಫರ ಭಾವಚಿತ್ರದ ಅದ್ಧೂರಿ ಮೆರವಣಿಗೆ, ಸಂವಿಧಾನ, ರಾಮಾಯಣ, ಕುರಾನ್ ಮತ್ತು ಬೈಬಲ್ ಗ್ರಂಥಗಳ ಮೆರವಣಿಗೆಯೂ ನಡೆಯಲಿದೆ. ಈ ಸರ್ವಧರ್ಮ ಸಮನ್ವಯದ ಕಾರ್ಯಕ್ರಮಕ್ಕೆ ಎಲ್ಲ ಧರ್ಮದವರೂ ಭಾಗಿಯಾಗಲಿದ್ದಾರೆ ಎಂದರು.

ಗದಗ ಭಾವೈಕ್ಯತೆಯ ನಾಡು. ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ರೀತಿಯಲ್ಲಿಯೇ ಭೀಮ ಮಂದಿರ ಸ್ಥಾಪನೆಗಾಗಿ ಅಭಿಯಾನ ಆರಂಭಿಸಲಾಗಿದೆ. ಅದರ ಭಾಗವಾಗಿ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಶಿಶುನಾಳ ಶರೀಫರು ಒಳಗೊಂಡ ಸಮಾನತೆಯ ಮಂದಿರ ಸ್ಥಾಪನೆಗೆ ಯೋಜಿಸಲಾಗಿದೆ. ಅದಕ್ಕಾಗಿ ಟ್ರಸ್ಟ್ ಒಂದನ್ನು ರಚಿಸಲಾಗಿದ್ದು, ಭೂದಾನ ಮಾಡಿದ ಮಹನೀಯರ ಪಾದಪೂಜೆ ಮಾಡಿ, ಶೀಘ್ರವೇ ಭೂಮಿಯನ್ನು ಹಸ್ತಾಂತರ ಮಾಡಿಕೊಂಡು ಸಮಾನತೆಯ ಜ್ಞಾನ ಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಮತ್ತು ಶಿಶುನಾಳ ಶರೀಫರನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸಬಾರದು ಎನ್ನುವ ಕಾರಣಕ್ಕೆ, ಏ. 14ರಂದು ಭವ್ಯ ಮೆರವಣಿಗೆಯ ನಂತರ ಮಹನೀಯರ ಪುತ್ಥಳಿಯನ್ನು ನನ್ನ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಅವರ ಆಶಯವನ್ನು ಭಕ್ತಿಯಿಂದ ಗೌರವಿಸುವ ಕೆಲಸ ಆರಂಭವಾಗಲಿದೆ. ಸಮಾನತೆಯ ಮಂದಿರ ಸ್ಥಾಪನೆಗಾಗಿ ಮತ್ತೊಮ್ಮೆ ಜೋಳಿಗೆ ಹಾಕಿಕೊಂಡು ಜನರ ಮುಂದೆ ಹೋಗುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ರವಿ ಶಿದ್ಲಿಂಗ, ಚಂದ್ರಶೇಖರ ಹರಿಜನ, ಪರಮೇಶ್ ನಾಯಕ್, ಚಾಂದಸಾಬ್ ಕೊಟ್ಟೂರ, ವಸಂತ ಪಡಗದ, ಶರಣು ಚಿಂಚಲಿ, ಕೆ.ವಿ. ಗದುಗಿನ, ಉಡಚಪ್ಪ ಹಳ್ಳಿಕೇರಿ, ಮಂಜುನಾಥ ಮ್ಯಾಗೇರಿ, ಬಾಬು ಯಲಿಗಾರ, ವಸಂತ ಪಡಗದ ಇತರರು ಉಪಸ್ಥಿತರಿದ್ದರು.

ಸ್ವಪಕ್ಷದವರೇ ನನ್ನ ಸೋಲಿಗೆ ಕಾರಣ ಎನ್ನುವ ಕುರಿತಾದ ಚರ್ಚೆಗೆ ಇದು ಸಮಯವಲ್ಲ. ಬಿಜೆಪಿ ನನಗೆ ಎರಡು ಬಾರಿ ಸ್ಪರ್ಧೆಗೆ ನೀಡಿದೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಹಾವೇರಿ-ಗದಗ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸಿ, ಹೆಚ್ಚಿನ ಮತಗಳನ್ನು ಸೆಳೆಯುವ ಕೆಲಸ ಮಾಡುತ್ತೇನೆ. ಆದರೆ ಚುನಾವಣೆ, ರಾಜಕೀಯದಿಂದ ಮಾತ್ರ ದೂರ ಇದ್ದೇನೆ.
– ಅನಿಲ ಮೇಣಸಿನಕಾಯಿ.
ಬಿಜೆಪಿ ಮುಖಂಡ.

ಅನಿಲ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷದ ಕುರಿತಾಗಿ ಕೇಳಿದ ಪ್ರಶ್ನೆಗೆ ಅಸಮಾಧಾನಗೊಂಡ ಬಿಜೆಪಿ ಮುಖಂಡ ಕಾಂತಿಲಾಲ್ ಬನ್ಸಾಲಿ, ನಾನು ಯಾರಿಗೂ ಹೆದರುವದಿಲ್ಲ, ಯಾರ ಮಾತಿಗೂ ಬಗ್ಗುವುದಿಲ್ಲ. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಬೇರೆ ಕ್ಷೇತ್ರದವರು ಬಂದು ಇಲ್ಲಿ ಶಾಸಕರಾಗಲು ಬಿಡುವುದಿಲ್ಲ. ಅನಿಲ ಮೆಣಸಿನಕಾಯಿ ಅವರನ್ನು ಶಾಸಕರನ್ನಾಗಿ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಶಪಥ ಮಾಡಿದರು.

ಈ ಹಿಂದೆ ಕೋವಿಡ್ ಸಂದರ್ಭದಲ್ಲಿ `ಮನುಕುಲಕ್ಕಾಗಿ ಭಿಕ್ಷೆ’ ಅಭಿಯಾನದ ಮೂಲಕ 4 ಕೋಟಿ ರೂ. ಮೊತ್ತದ ಆಹಾರ ಧಾನ್ಯಗಳನ್ನು ಸಂಗ್ರಹಿಸಿ, 20 ಸಾವಿರ ಕುಟುಂಬಗಳಿಗೆ ತಲುಪಿಸಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮನೆಗೊಂದು ರೊಟ್ಟಿ, 1 ರೂ. ನಾಣ್ಯ ಸಂಗ್ರಹಿಸುವ ಅಭಿಯಾನದ ಮೂಲಕ ಜನರಿಂದ 1 ರೂ. ಪಡೆದು ಚುನಾವಣೆಗೆ ಸ್ಪರ್ಧಿಸಿದ್ದೆ. ಬಿಸಿ ಬಿಸಿ ರೊಟ್ಟಿ ಕೊಟ್ಟ ಜನರ ಮಾನವೀಯ ಗುಣ ಕಂಡು ಪ್ರೇರಣೆಯಾಗಿ, ಈ ಸಮಾನತೆಯ ಮಂದಿರ ಸ್ಥಾಪನೆ ಸತ್ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಅನಿಲ್ ಮೆಣಸಿನಕಾಯಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here