ವಿಜಯಸಾಕ್ಷಿ ಸುದ್ದಿ, ರೋಣ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಇಲಾಖೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಬೇಡಿಕೆ ಆಧಾರಿತ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಇಲಾಖೆಗೆ ಸಲ್ಲಿಸಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬಿ.ಕಂದಕೂರ ಹೇಳಿದರು.
ತಾಲೂಕಿನ ಸವಡಿ ಗ್ರಾ.ಪಂನಲ್ಲಿ ಹಮ್ಮಿಕೊಂಡಿದ್ದ `ಉದ್ಯೋಗ ಖಾತರಿ ನಡಿಗೆ ಸಬಲತೆಯೆಡಗೆ’ ಅಭಿಯಾನ ಕಾಮಗಾರಿ ಬೇಡಿಕೆ ಪಡೆದುಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಬೇಕು.
ಗಂಡು-ಹೆಣ್ಣಿಗೆ ಸಮಾನ ಕೂಲಿ, ಯೋಜನೆಯಡಿ ದೊರೆಯುವ ವಯಕ್ತಿಕ ಸೌಲಭ್ಯ ಅರ್ಹತೆಗಳು, ಗ್ರಾಮೀಣ ಪ್ರದೇಶದಲ್ಲಿ ಕುಟುಂಬಕ್ಕೆ 100 ದಿವಸ ಕೆಲಸ ಖಾತರಿ ಸೇರಿದಂತೆ ನರೇಗಾ ಯೋಜನೆ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದ ಮನೆ ಮನೆಗೆ ನರೇಗಾ ಯೋಜನೆಯ ಕುರಿತು ಕರಪತ್ರ ನೀಡಿ ಬೇಡಿಕೆ ಸ್ವೀಕರಿಸಲಾಗುತ್ತಿದ್ದು, ಯಾವುದೇ ಮಾಹಿತಿ ಮತ್ತು ಕುಂದು ಕೊರತೆಗಾಗಿ 8277506000 ಏಕೀಕೃತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ತಾಂತ್ರಿಕ ಸಹಾಯಕರು, ಇಂಜಿನಿಯರ್, ಬಿಎಫ್‌ಟಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಕ್ರಿಯಾ ಯೋಜನೆ ಪಟ್ಟಿಯಂತೆ ಪ್ರತಿ ಗ್ರಾ.ಪಂನಲ್ಲಿ ಕೆಲಸ ನೀಡುವ ನರೇಗಾ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. 30ರವರೆಗೆ ಗ್ರಾ.ಪಂ ಮಟ್ಟದ ವಾರ್ಷಿಕ ಕ್ರಿಯಾ ಯೋಜನೆಯ ಅನುಮೋದನೆಗಾಗಿ ವಿಶೇಷ ಗ್ರಾಮ ಸಭೆ ಮಾಡಬೇಕು, 5ರ ಒಳಗೆ ಗ್ರಾ.ಪಂ ವಾರ್ಷಿಕ ಕ್ರಿಯಾ ಯೋಜನೆಯನ್ನು ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು ಎಂದು ಚಂದ್ರಶೇಖರ ಬಿ.ಕಂದಕೂರ ತಿಳಿಸಿದರು.