ಮಕ್ಕಳ ಬೌದ್ಧಿಕ ವಿಕಾಸಕ್ಕೆ ಶಿಬಿರಗಳು ಅಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ ನೀಡುವುದು ಪಾಲಕರು ಹಾಗೂ ಸಮಾಜದ ಬಹುಮುಖ್ಯ ಜವಾಬ್ದಾರಿ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ರಾಜಗೋಪಾಲ ಕಡ್ಲಿಕೊಪ್ಪ ಅವರು `ವಿಶ್ವಕರ್ಮ ವಿದ್ಯಾರ್ಥಿ ವಿಕಾಸ’ ಬೇಸಿಗೆ ಶಿಬಿರ ಆಯೋಜಿಸಿದ್ದು ಶ್ಲಾಘನೀಯ ಕಾರ್ಯ ಎಂದು ಹಿಂದುಳಿದ ವರ್ಗಗಳ ಸಮುದಾಯದ ಮಹಾಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಐಲಿ ಹೇಳಿದರು.

Advertisement

ಅವರು ಇಲ್ಲಿನ ವಿಜಯನಗರ ಬಡಾವಣೆಯಲ್ಲಿರುವ ಶ್ರೀ ವಿಶ್ವಕರ್ಮ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ `ವಿಶ್ವಕರ್ಮ ವಿದ್ಯಾರ್ಥಿ ವಿಕಾಸ’ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಕ್ಕಳು ಏನನ್ನಾದರೂ ಸಾಧಿಸಬೇಕು ಎಂಬ ಛಲ ಹೊಂದಬೇಕು. ಸಾಧನೆಯ ಕುರಿತು ದೊಡ್ಡದಾಗಿ ಕನಸು ಕಾಣಬೇಕು. ಆ ಕನಸನ್ನು ನನಸಾಗಿಸಿಕೊಳ್ಳಲು ಸತತ ಪರಿಶ್ರಮ ಹಾಕಬೇಕು ಎಂದ ಅವರು, ಮಕ್ಕಳು ಶಿಬಿರದ ಸದುಪಯೋಗ ಪಡೆಯಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಹಾಗೂ ವಚನ ಟಿವಿ ಪ್ರಧಾನ ಸಂಪಾದಕ ಪ್ರೊ. ಸಿದ್ದು ಯಾಪಲಪರವಿ ಅವರು `ವ್ಯಕ್ತಿತ್ವ ವಿಕಸನ’ ವಿಷಯವಾಗಿ ಮಾತನಾಡಿ, ವ್ಯಕ್ತಿ ವ್ಯಕ್ತಿತ್ವವಾಗಿ ಪರಿವರ್ತನೆ ಹೊಂದಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಸ್ತು, ಬದ್ಧತೆ, ಸತತ ಪ್ರಯತ್ನ ಸಾಧನೆಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು, ಕನಸು ನನಸಾಗಿಸಿಕೊಳ್ಳಲು ಕ್ರಿಯಾಶೀಲರಾದಲ್ಲಿ ಗುರಿ ಮುಟ್ಟಲು ಸಾಧ್ಯ. ಆದರ್ಶ ವ್ಯಕ್ತಿಗಳ ಸಂಪರ್ಕ, ಭಾಷಣ ಹಾಗೂ ಮೌಲಿಕ ಪುಸ್ತಕಗಳ ಸಂಪರ್ಕ ಜೀವನದ ಬದಲಾವಣೆಗೆ ಸಾಧನಗಳು. ಹೀಗಾಗಿ ಮಕ್ಕಳು ಭಾಷಣ ಕೇಳುವುದು, ಒಳ್ಳೆಯ ಪುಸ್ತಕ ಓದುವುದು ಹಾಗೂ ಸಾಧಕ ವ್ಯಕ್ತಿಗಳ ಸಲಹೆ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಶಿಬಿರಾರ್ಥಿಗಳಿಗೆ ಸಂಧ್ಯಾವಂದನೆ ಸಾಮಗ್ರಿಗಳ ದಾನಿಗಳು ಹಾಗೂ ಅತಿಥಿಗಳಾಗಿ ಪಾಲ್ಗೊಂಡ ರೋಣ ತಾಲೂಕಾ ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಮೌನೇಶ ಅರ್ಕಸಾಲಿ, ವಿಶ್ವಕರ್ಮ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಿಂದಮ್ಮ ತೋಟಗಂಟಿ ಹಾಗೂ ವಿಶ್ವಕರ್ಮ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಮೌನೇಶ ಚಿ.ಬಡಿಗೇರ(ನರೇಗಲ್ಲ) ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಿಬಿರದ ಸಂಯೋಜಕರು ಹಾಗೂ ಶಿಕ್ಷಕರಾದ ಸುಮಂಗಲಾ ಪತ್ತಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ, ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಚಿಂತಕರಾದ ಡಾ. ಜಿ.ಬಿ. ಪಾಟೀಲ ಮಾತನಾಡಿ, ಶಿಬಿರದಲ್ಲಿ ಮಕ್ಕಳಿಗೆ ಆಧ್ಯಾತ್ಮ, ವಿಜ್ಞಾನ, ತಂತ್ರಜ್ಞಾನಗಳ ಸಾಮಾನ್ಯ ಜ್ಞಾನ ನೀಡುವುದರೊಂದಿಗೆ, ಅವರ ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜಗೋಪಾಲ ಕಡ್ಲಿಕೊಪ್ಪ ಅವರು ಶಿಬಿರ ಹಮ್ಮಿಕೊಂಡಿದ್ದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here