ಆಹಾರತಜ್ಞರ ಪ್ರಕಾರ ದಿನದ ಮೊದಲ ಆಹಾರವಾಗಿ ಸೇವಿಸಲು ಲಿಂಬೆ ಬೆರೆಸಿದ ನೀರು ಅಥವಾ ಸೇಬಿನ ಶಿರ್ಕಾ ಬೆರೆಸಿದ ನೀರು ಅಥವಾ ಎಳನೀರು ಕುಡಿಯುವುದು ಅತ್ಯುತ್ತಮ ಆಯ್ಕೆಗಳಾಗಿವೆ. ನಂತರ ಸೇವಿಸುವ ಆಹಾರಗಳಿಗೆ ನೀವು ಹಾಲನ್ನು ಬೆರೆಸಿ ಸೇವಿಸಬಹುದು. ಏಕೆಂದರೆ ಲಿಂಬೆನೀರು ಅಥವಾ ಎಳನೀರು ದೇಹದ ಕಲ್ಮಶಗಳನ್ನು ನಿವಾರಿಸಲು ಮತ್ತು ದೇಹಕ್ಕೆ ಅಗತ್ಯವಿರುವ ನೀರಿನ ಅಂಶವನ್ನು ನೀಡಲು ಸಮರ್ಥವಾಗಿವೆ.
ಹಾಲು ಈ ಕಾರ್ಯಗಳನ್ನು ನಿರ್ವಹಿಸಲಾರದು.ತಜ್ಞರು ಸಲಹೆ ನೀಡುವ ಪ್ರಕಾರ ದಿನದ ಮೊದಲ ಆಹಾರವಾಗಿ ದೇಹವನ್ನು ಕಲ್ಮಶರಹಿತವಾಗಿಸಲು ಸಹಕರಿಸುವ ದ್ರವಾಹಾರವನ್ನು ಸೇವಿಸಬೇಕು ಹಾಗೂ ಈ ಕಾರ್ಯವನ್ನು ನಿರ್ವಹಿಸಲು ಸುಮಾರು ಮುಕ್ಕಾಲು ಘಂಟೆಯಾದರೂ ಹಾಗೇ ಬಿಡಬೇಕು. ಲಿಂಬೆನೀರಿನ ಬದಲಿಗೆ ಮಜ್ಜಿಗೆ ಅಥವಾ ಛಾಂಛ್ ಸುಲಭ ದ್ರವಾಹಾರಗಳಾಗಿವೆ. ಇವುಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಸುಲಭವಾಗುತ್ತದೆ.
ಖಾಲಿಹೊಟ್ಟೆಯಲ್ಲಿ ಹಾಲು ಪ್ರಥಮ ಆಹಾರವಾಗಿ ಸೇವಿಸುವುದು ಯಾರಿಗೂ ತರವಲ್ಲ. ಇದು ನಿಮ್ಮ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ವಾತ ಪ್ರಕೃತಿಯ ವ್ಯಕ್ತಿಯಾಗಿದ್ದರೆ (ವಾಯು) ಅಥವಾ ಕಫ ಪ್ರಕೃತಿಯವರಾಗಿದ್ದರೆ (ನೀರು) ಎಂದಿಗೂ ನೀವು ಖಾಲಿಹೊಟ್ಟೆಯಲ್ಲಿ ಹಾಲನ್ನು ಸೇವಿಸಬಾರದು. ಯಾರಿಗೆ ಕೆಮ್ಮು ಮತ್ತು ಶೀತ, ಫ್ಲೂ ಮೊದಲಾದ ತೊಂದರೆಗಳು ಸುಲಭವಾಗಿ ಎದುರಾಗುತ್ತವೆಯೋ ಆ ವ್ಯಕ್ತಿಗಳೂ ಬೆಳಿಗ್ಗಿನ ಅಹಾರವಾಗಿ ಹಾಲನ್ನು ಸೇವಿಸಬಾರದು.
ಅತಿಯಾದ ಆಮ್ಲೀಯತೆಯ ಗುಣವಿರುವ ವ್ಯಕ್ತಿಗಳು ತಣ್ಣನೆಯ ಹಾಲನ್ನು ಸೇವಿಸಬಹುದು. ಹಾಲಿನಲ್ಲಿರುವ ಕ್ಯಾಲ್ಸಿಯಂ ಆಮ್ಲದೊಂದಿಗೆ ಬೆರೆತು ಉಪ್ಪಾಗಿಸುವ ಕಾರಣ ಅಲ್ಪ ಮಟ್ಟದ ಆಮ್ಲೀಯತೆಯನ್ನು ಗುಣಪಡಿಸಲು ನೆರವಾಗುತ್ತದೆ. ವಾತ ಪ್ರಕೃತಿಯ ವ್ಯಕ್ತಿಗಳು ದಿನದ ಇತರ ಹೊತ್ತಿನಲ್ಲಿ ಬೆಲ್ಲದೊಂದಿಗೆ ಹಾಲನ್ನು ಸೇವಿಸಿದರೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ.
* ಬರೆಯ ನೀರು, ಉಗುರು ಬೆಚ್ಚಗಿದ್ದರೆ ಸಾಕು. ಅತಿ ತಣ್ಣಗೂ ಇರಬಾರದು, ಅತಿ ಬಿಸಿಯೂ ಇರಬಾರದು. ಸುಮಾರು ಎರಡು ಲೋಟ
* ಎಳನೀರು. ಒಂದು ಮಧ್ಯಮ ಗಾತ್ರದ ಎಳನೀರು. ಈಗ ತಾನೇ ಕೆತ್ತಿದ ಎಳನೀರಿನಿಂದ ಸಂಗ್ರಹಿಸಿದ ನೀರು
* ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ ಸೇಬಿನ ಶಿರ್ಕಾ(apple cidar vinegar) ಬೆರೆಸಿದ ನೀರು
* ಒಂದು ಟೀ ಬ್ಯಾಗ್ ಹಸಿರು ಟೀ ಕುದಿಸಿದ ನೀರನ್ನು ತಣಿಸಿ ಕುಡಿಯುವುದು
* ಒಂದು ಲೋಟ ನೀರಿಗೆ ದೊಡ್ಡದಾದರೆ ಅರ್ಧ, ಚಿಕ್ಕದಾದರೆ ಒಂದು ಲಿಂಬೆಯ ರಸ ಬೆರೆಸಿದ ನಿರು
* ಈ ನೀರಿಗೆ ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿಯೂ ಸೇವಿಸಬಹುದು
* ಆಮ್ಲೀಯತೆಯ ತೊಂದರೆ ಇರುವ ವ್ಯಕ್ತಿಗಳು ಕೊಂಚ ಹಸಿಶುಂಠಿ ಕುದಿಸಿ ತಣಿಸಿದ ನೀರನ್ನು ಕುಡಿಯಬಹುದು
* ಹೊಟ್ಟೆಯಲ್ಲಿ ಗುಡುಗುಡು, ಉರಿ, ಕರುಳಿನ ಹುಣ್ಣು ಇರುವ ವ್ಯಕ್ತಿಗಳು ಒಂದು ಚಿಕ್ಕ ಚಮಚ ಲೋಳೆಸರ (ಆಲೋವೆರಾ) ತಿರುಳನ್ನು ಬೆರೆಸಿದ ನೀರನ್ನು ಕುಡಿಯಬಹುದು.