ಕನಿಷ್ಠ ವೇತನ ಪಾವತಿಸದ ಏಜೆನ್ಸಿಗಳ ಪರವಾನಿಗೆ ರದ್ದುಪಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಮಿಕರ ಕಲ್ಯಾಣಕ್ಕಾಗಿಯೇ ಕಾರ್ಮಿಕ ಇಲಾಖೆ ಕಾರ್ಯನಿರ್ವಹಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಗುತ್ತಿಗೆ ಪಡೆದ ಏಜೆನ್ಸಿದಾರರು ಪಾವತಿಸಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ವೇತನ ಪಾವತಿಸದ ಏಜೆನ್ಸಿಗಳ ಪರವಾನಿಗೆಯನ್ನು ರದ್ದುಪಡಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚಿಸಿದರು.

Advertisement

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು.

ಶ್ರಮ ವಹಿಸಿ ದುಡಿಯುವ ವರ್ಗಕ್ಕೆ ಸರ್ಕಾರದಿಂದ ಸರಿಯಾಗಿ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ವೇತನ ಹಾಗೂ ಪಿ.ಎಫ್. ಪಾವತಿಸದ ಏಜೆನ್ಸಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುವ ಮೂಲಕ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಇಲಾಖಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಪ್ರಕರಣಗಳ ಕುರಿತು ತಪಾಸಣೆ ಮಾಡಿದ ದಾಖಲೆಗಳ ಬಗ್ಗೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಪ್ರತಿ ಕೆಡಿಪಿ ಸಭೆಯಲ್ಲಿಯೂ ಬಾಲಕಾರ್ಮಿಕರ ಬಗ್ಗೆ ಪರಿಶೀಲನೆಯಾಗಬೇಕು. ಜೊತೆಗೆ ಬಾಲಕಾರ್ಮಿಕ ಪ್ರಕರಣಗಳ ಉಲ್ಲಂಘನೆ ಕುರಿತಂತೆ ಸಭೆಗಳು ಜರುಗಬೇಕು. ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಜರುಗಿಸಿ ಪ್ರತಿ ತಿಂಗಳು ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತದ ಮುಖ್ಯಸ್ಥರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದರಿಂದ ಪರಿಣಾಮಕಾರಿ ಜಾಗೃತಿ ಮೂಡಲಿದೆ ಎಂದ ಸಚಿವರು, ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಹೋಟೆಲ್, ಬಾಯ್ಲರ್, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಬಾಲ ಕಾರ್ಮಿಕರ ಬಳಕೆ ಮಾಡುವ ಬಗ್ಗೆ ಪರಿಶೀಲಿಸಬೇಕು. ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಸೌಲಭ್ಯಗಳು ತಲುಪಿರುವ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ಏಪ್ರಿಲ್ 1ರಿಂದ ಈವರೆಗೆ ಜಿಲ್ಲೆಯಲ್ಲಿ 1730 ತಪಾಸಣೆಗಳನ್ನು ನಡೆಸಲಾಗಿದ್ದು, 361 ಕಾರ್ಮಿಕರ ಉಲ್ಲಂಘನಾ ಪ್ರಕರಣಗಳು ಕಂಡುಬAದಿವೆ. 296 ಉಲ್ಲಂಘನಾ ಪ್ರಕರಣಗಳನ್ನು ಸರಿಪಡಿಸಲಾಗಿದೆ. 62 ಉಲ್ಲಂಘನಾ ಪ್ರಕರಣಗಳಿಗೆ ಸಂಬAಧಿಸಿದAತೆ ನೋಟೀಸ್ ಪ್ರಕಟಿಸಲಾಗಿದೆ. 5 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಗೆ ಸಂಬಂಧಿಸಿದಂತೆ 417 ತಪಾಸಣೆ ಕೈಗೊಳ್ಳಲಾಗಿದೆ. 3 ಪ್ರಕರಣಗಳಲ್ಲಿ 32 ಸಾವಿರ ರೂ. ದಂಡ ವಿಧಿಸಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆಯಡಿ ಸರ್ಕಾರಿ ಮಂಡಳಿ ಹಾಗೂ ಖಾಸಗಿಯಿಂದ 37 ದೂರುಗಳು ಸ್ವೀಕೃತವಾಗಿದ್ದು, 5 ದೂರುಗಳನ್ನು ಹೊರತುಪಡಿಸಿ ಉಳಿದೆಲ್ಲ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಉಪದಾನ ಪಾವತಿ ಕಾಯ್ದೆಯಡಿ ಬಾಕಿ ಇದ್ದ 155 ವಿವಾದ ಸೇರಿದಂತೆ ಒಟ್ಟು 192 ಸ್ವೀಕೃತಿಯಾದ ಪ್ರಕರಣಗಳಿವೆ. ಈ ಪೈಕಿ 156 ಬಾಕಿ ಇದ್ದು, ಉಳಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 1,31,535 ಕಾರ್ಮಿಕ ಕಾರ್ಡ್ಗಳ ನೋಂದಣಿಯಾಗಿದ್ದು, ಈ ಪೈಕಿ 56,671 ಕಾರ್ಮಿಕ ಕಾರ್ಡ್ಗಳು ಚಾಲ್ತಿಯಲ್ಲಿವೆ. ತಾಯಿ-ಮಗು ಸಹಾಯಹಸ್ತ ಯೋಜನೆಯಡಿ ಜಿಲ್ಲೆಯಲ್ಲಿ 167 ಅರ್ಜಿ ಸ್ವೀಕೃತವಾಗಿದ್ದು, 141 ವಿಲೇವಾರಿ ಮಾಡಲಾಗಿದೆ. 73 ಅರ್ಜಿಗಳನ್ನು ಅನುಮೋದಿಸಿದೆ ಎಂದು ಸಭೆಗೆ ವಿವರವಾದ ಮಾಹಿತಿ ಒದಗಿಸಿದರು.

ಗದಗ ಜಿಲ್ಲೆಯಲ್ಲಿ 2023-2024ರಿಂದ ಈವರೆಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಯಡಿ ಒದಗಿಸಲಾದ ಅನುದಾನ ಹಾಗೂ ಸೌಲಭ್ಯದ ವಿವರ ಹೀಗಿದೆ.

ಮದುವೆ ಧನ ಸಹಾಯ ಯೋಜನೆಯಡಿ 2273 ಫಲಾನುಭವಿಗಳಿಗೆ 14.3 ಕೋಟಿ ರೂ, ಹೆರಿಗೆ ಧನಸಹಾಯ ಯೋಜನೆಯಡಿ 343 ಫಲಾನುಭವಿಗಳಿಗೆ 1.71 ಕೋಟಿ ರೂ, ತಾಯಿ-ಮಗು ಸಹಾಯ ಹಸ್ತ ಯೋಜನೆಯಡಿ 127 ಫಲಾನುಭವಿಗಳಿಗೆ 7.62 ಲಕ್ಷ ರೂ, ವೈದ್ಯಕೀಯ ಮರುಪಾವತಿ ಯೋಜನೆಯಡಿ 26 ಫಲಾನುಭವಿಗಳಿಗೆ 2.75 ಲಕ್ಷ ರೂ, ದುರ್ಬಲತೆಯ ಪಿಂಚಣಿ ಯೋಜನೆಯಡಿ 3 ಫಲಾನುಭವಿಗಳಿಗೆ 6 ಸಾವಿರ ರೂ, ಪ್ರಮುಖ ವೈದ್ಯಕೀಯ ಧನಸಹಾಯ ಯೋಜನೆಯಡಿ 189 ಫಲಾನುಭವಿಗಳಿಗೆ 1.20 ಕೋಟಿ ರೂ, ಪಿಂಚಣಿ ಧನಸಹಾಯ ಯೋಜನೆಯಡಿ 95 ಫಲಾನುಭವಿಗಳಿಗೆ 2.85 ಲಕ್ಷ, (ಅಪಘಾತ) ಎಕ್ಸಿಡೆಂಟ್ ಅಸಿಸ್ಟನ್ಸ್ ಯೋಜನೆಯಡಿ 10 ಫಲಾನುಭವಿಗಳಿಗೆ 50 ಲಕ್ಷ ರೂ, ಅಂತ್ಯಕ್ರಿಯೆ ವೆಚ್ಚ ಮತ್ತು ಡೆತ್ ಅಸಿಸ್ಟನ್ಸ್ ಯೋಜನೆಯಡಿ 314 ಫಲಾನುಭವಿಗಳಿಗೆ 2.55 ಕೋಟಿ ರೂ, ಟೂಲ್ ಕಿಟ್ ಯೋಜನೆಯಡಿ 2032 ಫಲಾನುಭವಿಗಳಿಗೆ 97.81 ಲಕ್ಷ, ಪ್ರಿವೆಂಟಿವ್ ಹೆಲ್ತ್ ಕೇರ್ ಯೋಜನೆಯಡಿ 33500 ಫಲಾನುಭವಿಗಳಿಗೆ 9.85 ಕೋಟಿ ರೂ, ಆರ್‌ಪಿಎಲ್ ತರಬೇತಿ ಯೋಜನೆಯಡಿ 1826 ಫಲಾನುಭವಿಗಳಿಗೆ 64.49 ಲಕ್ಷ ರೂ, ಆರ್‌ಪಿಎಲ್‌ಕಿಟ್ ಯೋಜನೆಯಡಿ 1826 ಫಲಾನುಭವಿಗಳಿಗೆ 46.16 ಲಕ್ಷ ರೂ, ಮೊಬೈಲ್ ಮೆಡಿಕಲ್ ಯುನಿಟ್ ಯೋಜನೆಯಡಿ 26241 ಫಲಾನುಭವಿಗಳಿಗೆ 1.20 ಕೋಟಿ ರೂ. ಹೀಗೆ ಒಟ್ಟು ವಿವಿಧ ಯೋಜನೆಗಳಡಿ 68832 ಫಲಾನುಭವಿಗಳಿಗೆ 33.00 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಜಿ.ಎಸ್. ಪಾಟೀಲ, ಡಾ. ಚಂದ್ರು ಲಮಾಣಿ, ಎಸ್.ವಿ. ಸಂಕನೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಸೇರಿದಂತೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಡಿ, ಕಾರ್ಮಿಕ ಆಯುಕ್ತರಾದ ಡಾ. ಎಚ್.ಎನ್. ಗೋಪಾಲಕೃಷ್ಣ, ಹೆಚ್ಚುವರಿ ಕಾರ್ಮಿಕ ಆಯುಕ್ತರಾದ ಡಾ. ಎಸ್.ಬಿ. ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಬಳಕೆ ನಿಯಂತ್ರಣವಾಗಿರಬಹುದಾದರೂ ನಿರ್ನಾಮವಾಗಿಲ್ಲ. ಅಧಿಕಾರಿ ವರ್ಗ ಬಾಲಕಾರ್ಮಿಕ ಬಳಕೆ ಆಗದಂತೆ ಸಂಪೂರ್ಣ ಶಿಸ್ತು ಕ್ರಮ ಕೈಗೊಳ್ಳಲಿ.

– ಎಚ್.ಕೆ. ಪಾಟೀಲ.

ಗದಗ ಜಿಲ್ಲಾ ಉಸ್ತುವಾರಿ ಸಚಿವರು.

ರಾಜ್ಯದಲ್ಲಿ 58 ಲಕ್ಷ ಕಾರ್ಮಿಕ ಕಾರ್ಡ್ ಹೊಂದಿದ್ದರೂ ಅವೆಲ್ಲವುಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಅಕ್ರಮ ಕಾರ್ಡ್ಗಳನ್ನು ಅನರ್ಹಗೊಳಿಸುವ ಮೂಲಕ ರಾಜ್ಯದಲ್ಲಿ ಒಟ್ಟು 32 ಲಕ್ಷ ಕಾರ್ಡ್ಗೆ ಮಿತಿಗೊಳಿಸಲಾಗಿದೆ. ಹೊಸ ಕಾರ್ಡ್ ನೋಂದಣಿ ಕುರಿತಂತೆ ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಪರಿಶೀಲನೆಯನ್ನು ಅಧಿಕಾರಿಗಳು ಸರಿಯಾಗಿ ಮಾಡಬೇಕು. ಇಲ್ಲದಿದ್ದಲ್ಲಿ ನಿಮ್ಮನ್ನೇ ಹೊಣೆಗಾರರನ್ನಾಗಿ ಶಿಕ್ಷಿಸಬೇಕಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here