ಮಂಡ್ಯ :- ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಮದ್ದೂರು – ತುಮಕೂರು ರಸ್ತೆಯ ತೊರೆಶೆಟ್ಟಿಹಳ್ಳಿ ಗ್ರಾಮದ ಬಳಿ ಜರುಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು, ಮೂವರು ಪಾದಚಾರಿಗಳಿಗೆ ಸಣ್ಣಪುಣ್ಣ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.
ಘಟನೆಯಲ್ಲಿ ಉದಯ್, ಅವಿನಾಶ್ ಹಾಗೂ ಗಂಭೀರ ಗಾಯಗೊಂಡಿದ್ದಾರೆ. ಪಾದಚಾರಿಗಳಾದ ದೀಪಿಕಾ, ಸುಶೀಲಮ್ಮಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಉಮೇಶ್ ಎಂಬುವರ ಮನೆ ಸ್ವಲ್ಪ ಮಟ್ಟಿಗೆ ಜಖಂಗೊಂಡಿದೆ.
ಘಟನೆ ವಿವರ:
ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದ ಮದ್ದೂರು – ತುಮಕೂರು ರಸ್ತೆಯಲ್ಲಿ ಕುಣಿಗಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಡಸ್ಟರ್ ಕಾರು ಆತಗೂರು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ನಿವಾಸಿಗಳ ಮೇಲೆ ಕಂಬ ಮತ್ತು ವೈರ್ ಗಳು ಬಿದ್ದು ಈ ಘಟನೆ ಸಂಭವಿಸಿದೆ.
ತಕ್ಷಣವೇ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಗಾಯಗೊಂಡವರನ್ನು ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಕೆಸ್ತೂರು ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನರೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಅಪಘಾತವಾಗಿದ್ದ ಕಾರನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.