ರಾಜರಾಜೇಶ್ವರಿ ಶಾಲೆಯ ವಾರ್ಷಿಕೋತ್ಸವ ಮುಗಿಸಿಕೊಂಡು ಬರುವಾಗ ನಡೆದ ದುರ್ಘಟನೆ…
ಗದಗ: ವೇಗವಾಗಿ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮವಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಜರುಗಿದೆ.
ಗದಗ ತಾಲೂಕಿನ ಹುಲಕೋಟಿ ಬಳಿ ನಡೆದಿರುವ ಈ ದಾರುಣ ಘಟನೆಯಲ್ಲಿ ಗದಗ ಜಿಲ್ಲೆಯ ರೋಣದ ಸಮುದಾಯ ಆರೋಗ್ಯಾಧಿಕಾರಿ (ಸದ್ಯ ಗದಗ ಮಲೇರಿಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ) ಡಾ. ಹನಮರಡ್ಡಿ ಗಿರಡ್ಡಿ ಅವರ ಪುತ್ರ ಸಂಜೀವ ಗಿರಡ್ಡಿ (15) ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಪುತ್ರ ಮಹಮದ್ ಜಾಯಿದ್ ಮುಜಾವರ್ (18) ಮೃತಪಟ್ಟ ವಿದ್ಯಾರ್ಥಿಗಳು.
ಆಶೀಸ್ ಗುಂಡೂರ್ ಹಾಗೂ ಚಾಲಕ ಸಪ್ತಗಿರಿ ಬಾಲರಾಜ್ ಧಾರವಾಡ ಎಂಬುವರು ಗಂಭೀರ ಗಾಯಗಳಾಗಿದ್ದು, ಗದಗ ಜೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಹುಲಕೋಟಿ ಯಿಂದ ವೇಗವಾಗಿ ಗದಗ ಕಡೆ ಬರುವಾಗ ಕಾಟನ್ ಮಿಲ್ ಬಳಿ ಡಿವೈಡರ್ ಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ನಿನ್ನೆ ಹುಲಕೋಟಿಯ ರಾಜರಾಜೇಶ್ವರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಗದಗ ನಗರಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ಸಂಜೀವ್ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಆಗಿದ್ದರೆ, ಮಹಮದ್ ಜಾಯಿದ್ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಎನ್ನಲಾಗಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.