ಬೆಂಗಳೂರು: ಬಿಜೆಪಿ ಸಂಸದ ಕೆ.ಸುಧಾಕರ್ ಹೆಸರು ಬರೆದಿಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳ ಕಾರು ಚಾಲಕ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಅವರು, “ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಸಂಸದರೇ ಕಾರಣ ಅಂತಾ ಬರೆದಿದ್ದಾನೆ. ಡೆತ್ ನೋಟ್ ನ ಪ್ರಕಾರವೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಆ ಹುಡುಗ ದಲಿತ ಸಮುದಾಯಕ್ಕೆ ಸೇರಿದವನು.ಪದೇ ಪದೇ ಹಣ ಕೇಳಿದ್ದಕ್ಕೆ ಅವನು ಒತ್ತಡದಿಂದ ಸೂಸೈಡ್ ಮಾಡಿಕೊಂಡಿದ್ದಾನೆ” ಎಂದು ವಿವರಿಸಿದರು.
ಅವರ ಮನೆಯವರು ದೂರು ಕೊಟ್ಟಂತೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಒಬ್ಬರ ಹತ್ತಿರನೋ ಇಬ್ಬರ ಹತ್ತಿರನೋ ಡೀಲ್ ಮಾಡಿದ್ರೆ ಬಾಬು ಯಾರು ಅಂತಾ ಗೊತ್ತಿರುತ್ತದೆ. ದಿನಕ್ಕೆ ಸಾವಿರ ಸಾವಿರ ಜನರ ಬಳಿ ಡೀಲ್ ಮಾಡಿದ್ರೆ ಬಾಬು ಯಾರು ಅಂತಾ ಗೊತ್ತಾಗುತ್ತದೆ ಹೇಳಿ. ಈ ಪ್ರಕರಣದಲ್ಲಿ ಸ್ಥಳೀಯ ಶಾಸಕರು, ಸಚಿವರ ಕೈವಾಡ ಇದ್ದರೆ ಸಿಬಿಐಗೆ ಕೊಡಲಿ.ಅವರು ರೆಡಿ ಇದ್ದೀರಾ,..? ಸಂಸದರೇ ಅದನ್ನು ಸಿಬಿಐಗೆ ಕೊಡಿಸಿ ಎಂದು ಸವಾಲು ಹಾಕಿದ್ದಾರೆ.