ಕಾರವಾರ/ಚಾಮರಾಜನಗರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಕರಕಲಾಗಿದ್ದು, ನಂಬರ್ಪ್ಲೇಟ್ ಸಹ ಪತ್ತೆಯಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಾರು ಮತ್ತು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತರು ಸಿದ್ದಾಪುರ ಮೂಲದವರು ಎಂದು ತಿಳಿದುಬಂದಿದ್ದು, ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿದ್ದಾರೆ.
ಇದಕ್ಕೆ ಸಮಾನವಾಗಿ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. KSRTC ಅಶ್ವಮೇಧ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ವಿಶೇಷವಾಗಿ ಎರಡು ವಾಹನಗಳ ಚಾಲಕರ ಸ್ಥಿತಿ ಚಿಂತಾಜನಕವಾಗಿದೆ.
ಗ್ರಾಮದ ಶಾಲೆ ಸಮೀಪದ ತಿರುವಿನಲ್ಲಿ ನಂಜನಗೂಡು ಕಡೆಯಿಂದ ಬರುತ್ತಿದ್ದ ಬಸ್, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಗಾಯಾಳುಗಳನ್ನು ತಕ್ಷಣ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.



