ಶಿವಮೊಗ್ಗ:- ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದ ಪರಿಣಾಮ ಓರ್ವ ವೃದ್ದೆ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆಯಲ್ಲಿ ಜರುಗಿದೆ.
ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. 65 ವರ್ಷದ ಪಾರ್ವತಮ್ಮ ಮೃತ ವೃದ್ಧೆ. ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದುಹೋಗುತಿದ್ದ ಸಾರ್ವಜನಿಕರು ಕೂಡಲೇ ಸಹಾಯಕ್ಕೆ ತೆರಳಿ ಇಬ್ಬರನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ವೃದ್ಧೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಕಾರಿನಲ್ಲಿದ್ದ ಯುವಕ ಹಾಗೂ ಯುವತಿಯನ್ನು ಸ್ಥಳೀಯರು ಜೀವದ ಹಂಗು ತೊರೆದು ಕಾಪಾಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆತಂದಿದ್ದರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.