ಚಿಕ್ಕಮಗಳೂರು:- ಎನ್.ಆರ್.ಪುರ ತಾಲೂಕಿನ 9ನೇ ಮೈಲಿಗಲ್ಲಿನ ಸಮೀಪದ ಬುಡಗಮನೆ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆಗೆ ಕಾರು ಡಿಕ್ಕಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ಘಟನೆ ಜರುಗಿದೆ.
9ನೇ ಮೈಲಿಗಲ್ಲು ಸಮೀಪದ ಚಿಕ್ಕ ಅಗ್ರಹಾರ ಅರಣ್ಯ ವ್ಯಾಪ್ತಿಯಲ್ಲಿ ಒಂದು ಕಾಡಾನೆ ರಸ್ತೆ ದಾಟಿದ್ದು ಮತ್ತೊಂದು ರಸ್ತೆ ದಾಟುವಾಗ ತಿರುವಿನಲ್ಲಿ ಬಂದಂತಹ ಕಾರು ಆನೆಗೆ ಡಿಕ್ಕಿ ಹೊಡೆದಿದೆ. ಕಾರು ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆ ಕಾರಿನ ಮೇಲೆಯೇ ಬಿದ್ದಿದೆ. ಇದರಿಂದ ಕಾರಿನ ಮುಂಭಾಗ ಬಹುತೇಕ ಜಖಂಗೊಂಡಿದೆ. ಕೂಡಲೇ ಎದ್ದು ನಿಂತ ಕಾಡಾನೆ ಕಾರಿನ ಮೇಲೆ ಯಾವುದೇ ಪ್ರತಿರೋಧ ತೋರದೆ ಕಾಡಿನೊಳಗಡೆ ಓಡಿ ಹೋಗಿದೆ.
ಕಾರಿನಲ್ಲಿ ಮೂವರು ಯುವಕರು ಪ್ರಯಾಣಿಸುತ್ತಿದ್ದು ತಿರುವಿನಲ್ಲಿ ಆನೆಯನ್ನ ನೋಡಿದ ಕೂಡಲೇ ಹುಡುಗರು ಗಾಬರಿಗೊಂಡು ಆನೆಗೆ ಡಿಕ್ಕಿ ಹೊಡೆಸಿದ್ದಾರೆ. ಅದೃಷ್ಟವಶಾತ್ ಆನೆಯೂ ಗಾಬರಿಯಾಗಿ ಪ್ರತಿರೋಧ ತೋರದ ಕಾರಣ ಯುವಕರು ಅನಾಹುತದಿಂದ ಪಾರಾಗಿದ್ದಾರೆ. ಎನ್.ಆರ್.ಪುರದಿಂದ ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.


