ಆಸ್ಟ್ರೇಲಿಯಾ:- ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಜನಾಂಗೀಯ ನಿಂದನೆ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ.
ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲಿ ಕಾರ್ ಪಾರ್ಕಿಂಗ್ ವಿಚಾರದಲ್ಲಿ ಜಗಳವಾಗಿ ಭಾರತೀಯ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿ, ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾರತದ ವಿದ್ಯಾರ್ಥಿ ಚರಣ್ ಪ್ರೀತ್ ಸಿಂಗ್ ಜೊತೆಗೆ ಆಸ್ಟ್ರೇಲಿಯಾದ ಜನರ ಗುಂಪೊಂದು ಜಗಳವಾಡಿ ಹಲ್ಲೆ ಮಾಡಿದ್ದಾರೆ.
ಚರಣ್ ಪ್ರೀತ್ ಸಿಂಗ್ಗೆ ವಿವಾಹವಾಗಿದ್ದು, ತನ್ನ ಪತ್ನಿ ಜೊತೆ ಕಾರಿನಲ್ಲಿ ಹೊರಗೆ ಸುತ್ತಾಡಲು ಹೋಗಿದ್ದರು. ಜನರ ಗುಂಪು ತನ್ನ ಬಳಿ ಬಂದು, ಜನಾಂಗೀಯ ನಿಂದನೆ ಮಾಡಿದ್ದರು. ಯಾವುದೇ ಪ್ರಚೋದನೆ ಇಲ್ಲದೆ ನನ್ನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಇಂಡಿಯನ್ ಎಂದು ಬೈದರು. ಬಳಿಕ ಪಂಚ್ ಮಾಡಿ ಹೊಡೆದರು. ನಾನು ತಿರುಗಿಸಿ ಹೊಡೆಯಲು ಯತ್ನಿಸಿದೆ, ಆದರೆ ಅವರೇ ನಾನು ಪ್ರಜ್ಞೆ ಕಳೆದುಕೊಳ್ಳುವವರೆಗೂ ಹೊಡೆದರು ಎಂದು ಚರಣ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಈ ರೀತಿಯ ಘಟನೆಗಳು ನಡೆದರೆ ನಮಗೆ ನಮ್ಮ ದೇಶಕ್ಕೆ ವಾಪಸ್ ಹೋಗಬೇಕು ಎಂಬ ಭಾವನೆ ಬರುತ್ತೆ. ನೀವು ನಿಮ್ಮ ದೇಹದಲ್ಲಿ ಏನನ್ನೂ ಬೇಕಾದರೂ ಬದಲಿಸಬಹುದು. ದೇಹದ ಬಣ್ಣ ಬದಲಿಸಲು ಸಾಧ್ಯವಿಲ್ಲ ಎಂದು ಭಾರತದ ವಿದ್ಯಾರ್ಥಿ ಚರಣ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಹಲ್ಲೆಯಿಂದ ಚರಣ್ ಪ್ರೀತ್ ಸಿಂಗ್ ಗೆ ಮೆದುಳಿಗೆ ಗಾಯವಾಗಿದೆ. ಮುಖಕ್ಕೂ ತೀವ್ರ ಗಾಯವಾಗಿದೆ. ಬಳಿಕ ಎಮರ್ಜೆನ್ಸಿ ಸೇವೆಯ ಅಧಿಕಾರಿಗಳು ಬಂದು ಚರಣ್ ಪ್ರೀತ್ ಸಿಂಗ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಲ್ಲೆ ಕೇಸ್ ನಲ್ಲಿ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ಕೈಗೊಂಡಿದ್ದಾರೆ.