ವಿಜಯಸಾಕ್ಷಿ ಸುದ್ದಿ, ಗದಗ : ಪದವಿಪೂರ್ವ ಶಿಕ್ಷಣವನ್ನು ಕಲಿಯುತ್ತಿರುವ ಇಂದಿನ ವಿದ್ಯಾರ್ಥಿ ಪರಿಶ್ರಮ ಪಟ್ಟು ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆದರೆ, ಆತನ ಸಹಿಯು ದೇಶದ ಪ್ರಧಾನ ಮಂತ್ರಿಯವರ ಸಹಿಗಿಂತಲೂ ಮಿಗಿಲು ಎಂದು ಸ್ವತಃ ನರೇಂದ್ರ ಮೋದಿಯವರೇ ಒಂದು ಸಿ.ಎ. ಸಮಾರಂಭದಲ್ಲಿ ತಿಳಿಸಿದ್ದಾರೆಂದು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟ್ರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಹುಬ್ಬಳ್ಳಿ ಶಾಖೆಯ ಸಂಪನ್ಮೂಲ ವ್ಯಕ್ತಿ ಸಿ.ಎ. ಶಿವಾನಂದ ಮಾಳಗಾವಿ ತಿಳಿಸಿದರು.
ಅವರು ಗದುಗಿನ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ `ಕರಿಯರ್ ಕೌನ್ಸಿಲಿಂಗ್ ಪ್ರೋಗ್ರಾಮ್ ಫಾರ್ ಸಿ.ಎ. ವರ್ಕ್ಶಾಪ್’ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವರ್ಕ್ಶಾಪ್ ನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ‘ಸಂವಾದ ಕಾರ್ಯಕ್ರಮ’ ನಡೆಯಿತು. ವಿದ್ಯಾರ್ಥಿಗಳು ಕೇಳಿದ ಎಲ್ಲ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ಶಾಂತತೆಯಿಂದ ಆಲಿಸಿ ಅವುಗಳಿಗೆ ಸಮರ್ಪಕ ಉತ್ತರ ನೀಡಿ ವಿದ್ಯಾರ್ಥಿಗಳ ಮನ ತಣಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಇಂದು ವಾಣಿಜ್ಯ ವಿಷಯಕ್ಕೆ ಹಿಂದೆಂದಿಗಿಂತಲೂ ಬೇಡಿಕೆ ಇದೆ. ವಾಣಿಜ್ಯ ವಿದ್ಯಾರ್ಥಿಗಳಾದ ತಾವು ಆಸಕ್ತಿವಹಿಸಿ, ಪರಿಶ್ರಮ ಪಟ್ಟು, ಸಮರ್ಪಕ ಕೋರ್ಸ್ಗಳಲ್ಲಿ ಭಾಗವಹಿಸಿ ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ, ನಿರ್ದೇಶಕರಾದ ಪ್ರೊ. ರೋಹಿತ ಕೆ.ಒಡೆಯರ್, ಪ್ರೊ. ರಾಹುಲ್ ಕೆ.ಒಡೆಯರ್, ಪ್ರೊ. ಉಡುಪಿ ದೇಶಪಾಂಡೆ, ಉಪ ಪ್ರಾಚಾರ್ಯ ಪ್ರೊ. ಸಯೈದ ಮತೀನ ಮುಲ್ಲಾ, ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಡಿ.ಬಿ. ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು. ಪ್ರೊ. ಸಂಗೀತಾ ಬೀಳಗಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎಸ್.ಎಸ್. ವಜ್ರಬಂಡಿ ವಂದಿಸಿದರು.