ಮಂಗಳೂರು: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ದೇಶದ ಮೇಲೂ ಬಿದ್ದಿದ್ದು, ಕಮರ್ಷಿಯಲ್ ಹಾಗೂ ಗೃಹ ಬಳಕೆಯ ಸಿಲಿಂಡರ್ ಅಭಾವ ತಲೆದೋರಿದೆ.
ಈ ಮಧ್ಯೆಯೇ ನವಮಂಗಳೂರು ಬಂದರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಖಾರ್ಗೋ ಹಡಗು ಆಗಮಿಸಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ. ಅಮೆರಿಕದ ಟೆಕ್ಸಾಸ್‍ನಿಂದ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಆಗಮಿಸಿದೆ.
ಏಜೀಸ್ ಕಂಪನಿಗೆ ಎಲ್‍ಪಿಜಿಯನ್ನು ಈ ಹಡಗು ತಂದಿದೆ. ಮಾ.14 ರಂದು ಅಮೇರಿಕದಿಂದ ಪಿಕ್ಸಿಸ್ ಪಯಿನೀರ್ ಕಾರ್ಗೋ ಹಡಗು ಹೊರಟಿತ್ತು. ಇಂದು ಮಂಗಳೂರಿಗೆ ತಲುಪಿದ್ದು, ರಾಜ್ಯದಲ್ಲಿ ತಲೆದೂರಿರುವ ಸಿಲಿಂಡರ್ ಅಭಾವ ಪರಿಹಾರ ಆಗುವ ನಿರೀಕ್ಷೆ ಇದೆ.
ಇನ್ನೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಹಲವು ಹೋಟೆಲ್‌ಗಳು ಆಹಾರ ಪದಾರ್ಥಗಳ ದರ ಹೆಚ್ಚಿಸಿದ್ದು, ಗ್ರಾಹಕರಿಗೂ ಬಿಸಿ ತಟ್ಟಿದಂತಾಗಿದೆ.



