ಉಡುಪಿ: ಸಿಎಂ, ಗೃಹಮಂತ್ರಿಗಳು, ಶಿಕ್ಷಣ ಸಚಿವರು ಸಮಾಜದ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ನಗರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಆಳುವ ಸರ್ಕಾರಕ್ಕೆ ಏನಾಗಿದೆಯೋ ಅರ್ಥವಾಗುತ್ತಿಲ್ಲ.
ಸಿಇಟಿ ಪರೀಕ್ಷೆಯಲ್ಲಿ ಕಿವಿಯೋಲೆ ತೆಗೆಸಿದಾಗ ವಿವಾದ ಆಗಿತ್ತು. ಮಾಂಗಲ್ಯ ತೆಗೆಯಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ ತೆಗೆಯಲು ಪ್ರಾರಂಭ ಮಾಡಿದ್ದಾರೆ. ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ವಾಗ್ಧಾಳಿ ನಡೆಸಿದ್ದಾರೆ.
ಮಂತ್ರಿಗಳೇ ನಿಮಗೆ ಗೊತ್ತಿಲ್ಲ ಅಂತೀರಿ. ತಪ್ಪು ಮಾಡಿದವರ ಮೇಲೆ ತಕ್ಷಣ ಕ್ರಮವಾಗಲಿ. ಒಂದು ಧರ್ಮದವರು ಏನು ಬೇಕಾದರೂ ಹಾಕಬಹುದಾ? ಮತ್ತೊಂದು ಧರ್ಮದವರು ಏನೂ ಹಾಕುವಂತಿಲ್ಲ ಅನ್ನೋದು ಸರಿಯಲ್ಲ. ಸಿಎಂ, ಗೃಹಮಂತ್ರಿಗಳು, ಶಿಕ್ಷಣ ಸಚಿವರು ಸಮಾಜದ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಲ್ಲ. ಗೌಡ ಸರಸ್ವತರು, ವಿಶ್ವಕರ್ಮರು ಎಲ್ಲರೂ ಹಾಕುತ್ತಾರೆ. ಯಜ್ಞೋಪವೀತವನ್ನು ಪವಿತ್ರ ಎಂದು ಜನ ಭಾವಿಸುತ್ತಾರೆ. ಈ ರೀತಿ ಮಾಂಗಲ್ಯ ಕಿವಿಯೋಲೆ ಜನಿವಾರ ತೆಗೆಸುವುದು ಸರಿನಾ? ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಾ ಅನ್ನೋದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.