ಗದಗ: ಬಡ್ಡಿ ಹಣಕ್ಕಾಗಿ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನು ಗದಗ ಶಹರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹರ್ಷವರ್ಧನ್ ಕಾಳೆ, ಸಮೀತ್ ಜೇವರ್ಗಿ, ಕೊಟ್ರೇಶ್ ಬಂಧಿತ ಆರೋಪಿಗಳು.
ಕೆಎಚ್ ಪಾಟೀಲ ಬಡಾವಣೆಯ ನಿವಾಸಿ ಪ್ರೇಮ್ ಖೋಡೆ ಎಂಬಾತನ ಮೇಲೆ ಈ ಮೂವರು ಹಲ್ಲೆ ಮಾಡಿದ್ದರು.
ಹರ್ಷವರ್ಧನ್ ಕಾಳೆ ಎಂಬಾತ ಸಿನಿಮೀಯ ಶೈಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಜೀಪ್‌ನೊಳಗೆ ಹಾಕಿಕೊಂಡು ಹೋಗಿ ರೂಮ್ ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದ.
ಪ್ರೇಮ್ ಖೋಡೆ ಮುಳಗುಂದ ನಾಕಾದ ಅಂಗಡಿಯೊಂದರಲ್ಲಿ ಕೆಲಸ ಮಾಡುತಿದ್ದ. ಪ್ರೇಮ್ ಖೋಡೆಗೆ ಹರ್ಷವರ್ಧನ್ 40 ಸಾವಿರ ಸಾಲ ಕೊಟ್ಟಿದ್ದ. ಈ ಹಣಕ್ಕೆ ತಿಂಗಳಿಗೆ 4 ಸಾವಿರ ರೂಪಾಯಿಯಂತೆ ಹರ್ಷವರ್ಧನ್ ಬಡ್ಡಿ ಪಡೆಯುತ್ತಿದ್ದ.
ಆದರೆ ಕಳೆದ ಕೆಲ ದಿನಗಳಿಂದ ಬಡ್ಡಿ ಕೊಡಲಾಗದೇ ಪ್ರೇಮ್ ಸಮಯಾವಕಾಶ ಕೇಳಿದ್ದ. ಅಲ್ಲದೇ ಬಡ್ಡಿಗಾಗಿ ಕಿರಿಕಿರಿ ಮಾಡಿದ್ರೆ ಎಸ್ ಪಿ ಕಚೇರಿಗೆ ಹೋಗೋದಾಗಿ ಎಚ್ಚರಿಕೆ ಕೊಟ್ಟಿದ್ದ. ಪ್ರೇಮ್ ಮಾತಿಗೆ ಸಿಟ್ಟಿಗೆದ್ದು, ಕೂತಿದ್ದ ಯುವಕನನ್ನ ಧರಧರನೆ ಎಳೆದು ಕಾರಲ್ಲಿ ಕರೆದುಕೊಂಡು ಹೋಗಿ ಕಳಸಾಪುರ ರಸ್ತೆಯ ಹೋಟೆಲ್ ಬಳಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದರು. ಬಡ್ಡಿ ದಂಧೆಕೋರನ ಮೃಗೀಯ ವರ್ತನೆ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಆ ವಿಡಿಯೋ ವೈರಲ್ ಕೂಡ ಆಗಿತ್ತು.
ಹಲ್ಲೆಯಿಂದಾಗಿ ಯುವಕ ಪ್ರೇಮ್‌ನ ಕತ್ತು, ಮುಖ, ಬೆನ್ನಿಗೆ ಗಾಯಗಳಾಗಿತ್ತು. ಗಾಯಾಳು ಪ್ರೇಮ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದ.ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ಈ ಬಗ್ಗೆ ಗದಗ ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಪ್ರಮುಖ ಆರೋಪಿ ಹರ್ಷವರ್ಧನ್ ಕಾಳೆ, ಸುಮೀತ್ ಜೇವರ್ಗಿ, ಕೊಟ್ರೇಶ್ ಎನ್ನುವ ಮೂರು ಜನರನ್ನು ಅರೆಸ್ಟ್ ಮಾಡಿದ್ದಾರೆ.. ಅಕ್ರಮವಾಗಿ ಬಡ್ಡಿ ದಂಧೆ ಮಾಡುವವರಿಗೆ ಪೊಲೀಸರು ಖಡಕ್ ಸೂಚನೆ ನೀಡಿದ್ದು, ಕಾನೂನನ್ನು ಯಾರೇ ಕೈಗೆತ್ತಿಕೊಂಡರು ಯಾರನ್ನೂ ಬಿಡುವ ಪ್ರಶ್ನೆ ಇಲ್ಲಾ ಎಂದು ಗದಗ ಎಸ್ಪಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.