ಹಾವೇರಿ:- ಗಾಯಗೊಂಡಿದ್ದ ಬಾಲಕನ ಕೆನ್ನೆಗೆ ಹೊಲಿಗೆ ಬದಲು ಫೆವಿಕ್ವಿಕ್ ಹಾಕಿದ ನರ್ಸ್ ಅನ್ನು ಕರ್ತವ್ಯ ಲೋಪದಡಿ ಸಸ್ಪೆಂಡ್ ಮಾಡಲಾಗಿದೆ. ಜ್ಯೋತಿ ಅಮಾನತುಗೊಂಡ ನರ್ಸ್.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರಧಾನಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆವಿಕ್ವಿಕ್ ಅಂಟು ದ್ರಾವಣವಾಗಿದ್ದು, ವೈದ್ಯಕೀಯ ಬಳಕೆಯಲ್ಲಿಲ್ಲ. ಮಗುವಿನ ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿ ಕರ್ತವ್ಯ ಲೋಪವೆಸಗಿದ್ದಾರೆ. ಸ್ಟಾಫ್ ನರ್ಸ್ ಬಗ್ಗೆ ಪ್ರಾಥಮಿಕ ವರದಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಗುವಿನ ಆರೋಗ್ಯದಲ್ಲಿ ಅಡ್ಡಪರಿಣಾಮಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಿದ್ದು, ಚಿಕಿತ್ಸೆಗೆ ಒಳಪಟ್ಟಿದ್ದ ಮಗು ಆರೋಗ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಘಟನೆ ಹಿನ್ನೆಲೆ:-
ಬಾಲಕನ ಕೆನ್ನೆಯ ಮೇಲೆ ಆದ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್ ಒಬ್ಬರು ಫೆವಿಕ್ವಿಕ್ ಹಾಕಿದ್ದರು. ಈ ಘಟನೆ ಜನವರಿ 14ರಂದು ಹಾವೇರಿ ಜಿಲ್ಲೆಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿತ್ತು.
ಆಟ ಆಡುವಾಗ ಬಿದ್ದು 7 ವರ್ಷದ ಗುರುಕಿಶನ್ ಕೆನ್ನೆಗೆ ಗಾಯವಾಗಿತ್ತು. ಗುರುಕಿಶನ್‌ನನ್ನು ಚಿಕಿತ್ಸೆಗೆಂದು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಷಕರು ಕರೆದೊಯ್ದಿದ್ದರು. ಕರ್ತವ್ಯದಲ್ಲಿದ್ದ ನರ್ಸ್ ಜ್ಯೋತಿ ಚಿಕಿತ್ಸೆ ನೀಡುವಾಗ ಕೆನ್ನೆಗೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದರು.
ಇದು ಪೋಷಕರ ಗಮನಕ್ಕೆ ಬಂದು ಏಕೆ ಹೀಗೆ ಮಾಡಿದ್ರಿ ಎಂದು ದಾದಿಯನ್ನು ಕೇಳಿದಾಗ, ಕೆನ್ನೆಗೆ ಸ್ಟಿಚ್ ಹಾಕಿದ್ರೆ ಕಲೆ ಆಗುತ್ತದೆ. ಅದಕ್ಕೆ ಫೆವಿಕ್ವಿಕ್ ಹಾಕಿದ್ದೇನೆ. ಕಳೆದ ಐದು ವರ್ಷದಿಂದ ಇದನ್ನೇ ಮಾಡುತ್ತಿದ್ದೇನೆ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ದೂರು ಕೊಟ್ಟಿದ್ದರು. ಇದೀಗ ಆರೋಗ್ಯ ಇಲಾಖೆ ನರ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ.