ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಯಿಸಿದ್ದನ್ನು, ತೆಗೆಯಲು ಒತ್ತಾಯಿಸಿದ್ದನ್ನು ಪಟ್ಟಣದ ಶ್ರೀ ದತ್ತಭಕ್ತ ಮಂಡಳಿಯು ತೀವ್ರವಾಗಿ ಖಂಡಿಸಿದೆ.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಖಂಡನಾ ಸಭೆಯಲ್ಲಿ ಕಾರ್ಯದರ್ಶಿ ರಘುನಾಥ ಕೊಂಡಿ ಮಾತನಾಡಿ, ಯಜ್ಞೋಪವೀತವು ಬ್ರಾಹ್ಮಣರಿಗೆ ಅತ್ಯಂತ ಪವಿತ್ರವಾದದ್ದು. ಒಮ್ಮೆ ಉಪನಯನದ ಸಮಯದಲ್ಲಿ ಧರಿಸಿದ ಜನಿವಾರವನ್ನು ಆ ವ್ಯಕ್ತಿ ತನ್ನ ಕೊನೆಯ ಉಸಿರಿರುವರೆಗೂ ಧರಿಸುತ್ತಾನೆ. ಯಜ್ಞೋಪವೀತಕ್ಕೆ ಅಂತಹ ಪವಿತ್ರ ಸ್ಥಾನವಿದೆ. ಯಾವ ಕಾರಣಕ್ಕೂ ತೆಗೆಯದ ಯಜ್ಞೋಪವೀತವನ್ನು ಪರೀಕ್ಷಾ ಸಿಬ್ಬಂದಿ ತೆಗೆಯಿಸಲು ಮುಂದಾಗಿದ್ದು ಅತ್ಯಂತ ಖಂಡನೀಯ ಸಂಗತಿ ಎಂದರು.
ಸಮಾಜದ ಹಿರಿಯರಾದ ಡಾ. ಜಿ.ಕೆ. ಕಾಳೆ ಮಾತನಾಡಿ, ಜನಿವಾರದಿಂದ ಸಿಇಟಿ ಪರೀಕ್ಷೆಗೆ ಏನು ತೊಂದರೆಯಾಗುತ್ತಿತ್ತು ಎಂಬುದು ಯಾರಿಗೂ ಅರ್ಥವಾಗದ ಸಂಗತಿ. ವಿದ್ಯಾರ್ಥಿಗಳ ಕೊರಳಲ್ಲಿನ ಜನಿವಾರವನ್ನು ತೆಗೆಯಿಸಬೇಕೆಂದು ರಕ್ಷಣಾ ಸಿಬ್ಬಂದಿಗೆ ಹೇಳಿದ್ದಾರು ಎಂಬುದು ಎಲ್ಲರಿಗೂ ತಿಳಿಯಬೇಕಿದೆ. ಶಿವಮೊಗ್ಗ ಮತ್ತು ಬೀದರ ಜಿಲ್ಲೆಗಳಲ್ಲಿ ನಡೆದಿರುವ ಈ ಕೃತ್ಯ ಅತ್ಯಂತ ಹೇಯವಾದದ್ದು. ಇಂತಹ ಆದೇಶ ಮಾಡಿದವರನ್ನು ಮೊದಲು ಪತ್ತೆ ಹಚ್ಚಿ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು. ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಗೆ ಆತ ಕೇಳುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೇಷರತ್ತಾಗಿ ಸೀಟ್ ನೀಡಬೇಕೆಂದು ಕಾಳೆ ಸರಕಾರವನ್ನು ಆಗ್ರಹಿಸಿದರು.
ಶ್ರೀಪಾಧಭಟ್ಟ ಜೋಷಿ ಮಾತನಾಡಿ, ಇಷ್ಟು ವರ್ಷಗಳ ಕಾಲ ನಡೆದಿರುವ ಪರೀಕ್ಷಾ ಸಮಯದಲ್ಲಿ ಇಲ್ಲದ ಹೊಸ ನಿಯಮ ಈಗ್ಯಾಕೆ ಜಾರಿಗೆ ಬಂದಿತು ಎಂಬ ಸಂಶಯ ಕಾಡುತ್ತದೆ. ಇದನ್ನು ನರೇಗಲ್ಲದ ಬ್ರಹ್ಮ ಸಮಾಜ ಬಲವಾಗಿ ಖಂಡಿಸುತ್ತದೆ ಎಂದರು.
ಸಭೆಯನ್ನುದ್ದೇಶಿಸಿ ಎ.ಜಿ. ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ, ಅರುಣ ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಆದರ್ಶ ಕುಲಕರ್ಣಿ, ಆನಂದ ಕುಲಕರ್ಣಿ, ಕೆ.ಬಿ. ದೇಸಾಯಿ, ಜಗನ್ನಾಥ ಸೂರಭಟ್ಟನವರ ಮುಂತಾದವರು ಮಾತನಾಡಿದರು.
ಅಧ್ಯಕ್ಷ ನಾಗರಾಜ ಗ್ರಾಮಪುರೋಹಿತ ಮಾತನಾಡಿ, ಈ ಘಟನೆಯನ್ನು ನರೇಗಲ್ಲ ಮತ್ತು ಸುತ್ತಲಿನ ಎಲ್ಲ ಗ್ರಾಮಗಳ ಬ್ರಹ್ಮ ಸಮಾಜದ ಪರವಾಗಿ ನಾವು ಖಂಡಿಸುತ್ತೇವೆ. ಬ್ರಾಹ್ಮಣರ ಬಗ್ಗೆ ಏನೇ ಮಾತನಾಡಿದರೂ, ಯಾವುದೇ ದಬ್ಬಾಳಿಕೆ ನಡೆಸಿದರೂ ನಡೆಯುತ್ತದೆ ಎನ್ನುವುದನ್ನು ಅಧಿಕಾರಶಾಹಿಗಳು ಮರೆತುಬಿಡಬೇಕು. ಇದು ಯಜ್ಞೋಪವೀತ ಧರಿಸುವ ಎಲ್ಲ ಸಮಾಜಗಳಿಗೆ ಸರಕಾರ ಮಾಡಿದ ಅನ್ಯಾಯವಾಗಿದೆ. ಇಂತವರನ್ನು ಕೂಡಲೇ ಸೇವೆಯಿಂದ ವಜಾ ಮಾಡಿ, ಸರಕಾರ ಬ್ರಹ್ಮ ಸಮಾಜ ಮತ್ತು ಯಜ್ಞೋಪವೀತ ಧರಿಸುವ ಎಲ್ಲ ಸಮಾಜಗಳ ಕ್ಷಮೆಯನ್ನು ಕೇಳಬೇಕೆಂದು ಆಗ್ರಹಿಸಿದರು.



