ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರ ಗುಂಪೊಂದು ಜೋರಾಗಿ ಹಾಡು ಹಾಡಿ ನೃತ್ಯ ಮಾಡುತ್ತ ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಮೆಟ್ರೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಭಾನುವಾರ ರಾತ್ರಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಯುವತಿಯರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗದ್ದಲ ಸೃಷ್ಟಿಸಿದ್ದಾರೆ. ಜೋರಾಗಿ ಹಾಡು ಹಾಡಿ ನೃತ್ಯ ಮಾಡುವುದರೊಂದಿಗೆ, ಕೆಲವು ಯುವತಿಯರು ಮೆಟ್ರೋ ಬೋಗಿಯ ನೆಲದ ಮೇಲೆ ಕುಳಿತುಕೊಂಡು ಹಾಡು ಹಾಡಿದ್ದರು ಎನ್ನಲಾಗಿದೆ. ಇದರಿಂದ ಇತರೆ ಪ್ರಯಾಣಿಕರಿಗೆ ಅಸೌಕರ್ಯ ಮತ್ತು ತೊಂದರೆ ಉಂಟಾಗಿದೆ.. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆ, ಮೆಟ್ರೋ ಸಿಬ್ಬಂದಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಮೆಟ್ರೋ ಆವರಣದಲ್ಲಿ ಸಾರ್ವಜನಿಕ ಶಿಸ್ತು ಮತ್ತು ಸೌಕರ್ಯ ಕಾಪಾಡುವ ಉದ್ದೇಶದಿಂದ ಇಂತಹ ವರ್ತನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



