ಹಣ ದುರುಪಯೋಗ ಪ್ರಕರಣಗಳನ್ನು ನಿಯಂತ್ರಿಸಬೇಕಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಒಬ್ಬ ನಿರ್ದೇಶಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಗುರುವಾರ ರೋಣದ ಕೆ.ಸಿ.ಸಿ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.

Advertisement

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷರು, ಕೆ.ಸಿ.ಸಿ ಬ್ಯಾಂಕ್ ಧಾರವಾಡ ನಿರ್ದೇಶಕ ಜಿ.ಪಿ. ಪಾಟೀಲ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಪ್ರಾಥಮಿಕ ಸಹಕಾರ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ನಿರ್ದೇಶಕರ ಕರ್ತವ್ಯ ಪ್ರಮುಖವಾಗಿದೆ ಎಂದರು.

ಗದಗ ಕೆ.ಸಿ.ಸಿ ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಕೆ. ಮಾಳಶೆಟ್ಟಿ ಮಾತನಾಡಿ, ಸಹಕಾರ ಕ್ಷೇತ್ರದ ಆರೋಗ್ಯಕರ ಬೆಳವಣಿಗೆ ಜನಾಗೃತಿಯನ್ನು ಅವಲಂಬಿಸಿರುತ್ತದೆ. ಜಾಗೃತ ಜನರಲ್ಲಿ ಸಹಕಾರ ಪ್ರಜ್ಞೆ ಮೂಡಿಬಂದಲ್ಲಿ ಸಹಕಾರಿ ವ್ಯವಸ್ಥೆಯ ಅರಿವು ಜಾಗೃತಗೊಳ್ಳುತ್ತದೆ. ಸಹಕಾರ ಸಂಸ್ಥೆಗಳ ಸದಸ್ಯ ಬಳಗ ತಮ್ಮ ಸಹಕಾರ ಸಂಸ್ಥೆಗಳ ಬಗ್ಗೆ ಸದಾ ಜಾಗೃತರಾಗಿರುವುದೇ ಆ ಸಂಘದ ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂದರು.

ಹಿರಿಯ ಸಹಕಾರಿಗಳಾದ ವ್ಹಿ.ಡಿ. ಮೇಘರಾಜ ಮಾತನಾಡುತ್ತಾ, ಸಹಕಾರ ತತ್ವಗಳು ಸಮಾಜದಲ್ಲಿ ಸಮಾನತೆ, ಆರ್ಥಿಕತೆ ಸಬಲೀಕರಣಕ್ಕೆ ಪೂರಕವಾಗಿವೆ. ಇದರಿಂದ ಸಾರ್ವಜನಿಕ ವಲಯ ಮತ್ತು ಖಾಸಗಿ ಕ್ಷೇತ್ರಗಳ ನಡುವೆ ಸಹಕಾರಿ ಕ್ಷೇತ್ರದ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಹಕಾರಿಗಳು ಹಾಗೂ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿ.ಬಿ. ದೊಡ್ಡಗೌಡ್ರ ಮಾತನಾಡುತ್ತಾ, ಪ್ಯಾಕ್ಸ್ಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯ ಸೌಲಭ್ಯಗಳನ್ನು ಅಳವಡಿಕೊಂಡು ಸಹಕಾರಿಗಳಿಗೆ ಅನುವು ಮಾಡಿಕೊಡುವುದು ಅತೀ ಅವಶ್ಯ. ಹಲವು ಅಂಶಗಳನ್ನು ಪರಿಶೀಲನೆ ಮಾಡಿದ ಮೇಲೆ ಮುದ್ದತ ಮೀರಿದ ಸಾಲದ ವಸೂಲಾತಿಗೆ ಕ್ರಮವಿಡುವುದು, ಸುಸ್ತಿ ಸಾಲವನ್ನು ವಸೂಲು ಮಾಡಲು ಸಾಕಷ್ಟು ತಿಳುವಳಿಕೆ ನೋಟಿಸುಗಳನ್ನು ಕಳಿಸಲು ಕ್ರಮ ವಹಿಸುವುದು ಎಮದರು.

ಗದಗ ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಸುರೇಶಗೌಡ ಎಂ.ಪಾಟೀಲ ಮಾತನಾಡುತ್ತಾ, ಪ್ಯಾಕ್ಸ್ಗಳು ಆರ್ಥಿಕವಾಗಿ ಸಬಲಗೊಂಡು ಲಾಭದಾಯಕವಾಗಿ ಕೆಲಸ ನಿರ್ವಹಿಸಿದರೆ ಸಹಕಾರ ಚಳುವಳಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಕೆ.ಸಿ.ಸಿ ಬ್ಯಾಂಕ್ ರೋಣ ನಿರೀಕ್ಷಕ ಎ.ಎ. ಶಾಬಾದಿ, ಕೆ.ಸಿ.ಸಿ ಬ್ಯಾಂಕ್ ರೋಣ ಕಿರಿಯ ನಿರೀಕ್ಷಕರುಗಳಾದ ಜಿ.ಪಿ. ರಾಠೊಡ, ಎಂ.ಬಿ. ಪೂಜಾರಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಸಿ.ಬಿ. ದೊಡ್ಡಗೌಡ್ರ, ಕೆ.ಓ.ಎಫ್. ಹುಬ್ಬಳ್ಳಿ ಮಾಜಿ ಅಧ್ಯಕ್ಷ ವ್ಹಿ.ಬಿ. ಚಿಕ್ಕರಡ್ಡಿ, ರೋಣ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು.

ಹಿರೇಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಶಂಕರಗೌಡ ವ್ಹಿ.ಗೌಡರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್‌ನ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ.ಯಲಿಗಾರ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಉತ್ತಮ ಸೇವೆ ಎಂದರೆ, ಎಲ್ಲರೂ ಸಂಸ್ಥೆಗೆ ಬಂದು ಯಾವುದೇ ತಾರತಮ್ಯವಿಲ್ಲದೆ ಅವರ ಕೆಲಸಗಳನ್ನು ಸಕಾಲದಲ್ಲಿ ಪೂರೈಸಿಕೊಂಡು ಹೋಗುವಂತಿರಬೇಕು. ಸಹಕಾರ ಸಂಸ್ಥೆಗಳು ತಮ್ಮ ಸದಸ್ಯರಿಗೆ ಅಥವಾ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ಏನಾದರೂ ನ್ಯೂನತೆಗಳು ಕಂಡು ಬಂದಲ್ಲಿ ತಕ್ಷಣವೇ ಅವುಗಳನ್ನು ಗಮನಿಸಿ, ಸೂಕ್ತ ಕ್ರಮಗಳನ್ನು ಕೈಗೊಂಡಾಗ ಸಂಸ್ಥೆಯ ಮೇಲಿನ ವಿಶ್ವಾಸ ಹೆಚ್ಚುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here