ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಲಿಸಿದ ಗುರುಗಳಿಗೆ, ಹೆತ್ತವರಿಗೆ ಮಕ್ಕಳ ಶೈಕ್ಷಣಿಕ ಸಾಧನೆಯೇ ದೊಡ್ಡ ಕಾಣಿಕೆ ಮತ್ತು ಸಂತಸವನ್ನು ನೀಡುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಹೇಳಿದರು.
ಅವರು ತಾಲೂಕಿನ ರಾಮಗೇರಿ ಗ್ರಾಮದ ಯಜಮಾನ್ ಜಿ.ಎಫ್. ಉಪನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಶಾಲೆಯ ಶಿಕ್ಷಕಿ, ಸಾಹಿತಿ ಮೈತ್ರಾದೇವಿ ಹಿರೇಮಠ ಅವರು ತಮ್ಮ ತಂದೆ ರಾಚಯ್ಯಸ್ವಾಮಿ ತಾಯಿ ಶಿವಗಂಗೆಯರ ಸ್ಮರಣಾರ್ಥ ಮಕ್ಕಳಿಗೆ ನಗದು ಪುರಸ್ಕಾರ, ಶಿಕ್ಷಕರು, ಹಿರಿಯರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಶಿಕ್ಷಣ/ಶಿಕ್ಷಕರ ಸೇವೆ ಅತ್ಯಂತ ಶ್ರೇಷ್ಠವಾಗಿದ್ದು, ಎಲ್ಲ ಮಕ್ಕಳನ್ನೂ ಪ್ರೀತಿ, ವಿಶ್ವಾಸ, ಸಮಾನತೆಯಿಂದ ಕಂಡು ವಿದ್ಯೆ ಕಲಿಸುವ ಶಿಕ್ಷಕರ ಸೇವೆ ಶ್ಲಾಘನೀಯ. ಅಲ್ಲದೇ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡಿ ಹರಸಿ-ಹಾರೈಸುವ ಶಿಕ್ಷಕರು ಸದಾ ಸ್ಮರಣೀಯರು. ಈ ನಿಟ್ಟಿನಲ್ಲಿ ರಾಮಗೇರಿ ಶಾಲೆಯ ಶಿಕ್ಷಕಿ ಮೈತ್ರಾದೇವಿ ಹಿರೇಮಠ ಅವರ ಕಾರ್ಯ ಪ್ರಶಂಸನೀಯ ಎಂದರು.
ಎಸ್‌ಎಸ್‌ಎಸ್‌ಸಿ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯಕ್ಕೆ 100ಕ್ಕೆ 100 ಅಂಕ ಪಡೆದ ವಿನೋದ ಪಾಟೀಲಗೆ 5001 ರೂ, 99 ಅಂಕ ಪಡೆದ ನವೀನ ಕುರಿ, ಅಕಾಶ ಜುಲಪಿ, ರವಿ ತಳವಾರ ಅವರಿಗೆ 1001 ರೂ ನಗದು ಬಹುಮಾನ ಹಾಗೂ ಮಾಲತಿ ದೊಡ್ಡಮನಿ, ಸಂಗೀತಾ ಬಡಿಗೇರ, ಪವನ್ ಪೂಜಾರ ಅವರಿಗೆ ತಮ್ಮದೇ `ಅನುಭಾವ ಶರದಿ’ ಪುಸ್ತಕ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಸದಸ್ಯೆ ಮುತ್ತಕ್ಕ ಬೆಟಗೇರಿ, ಗ್ರಾ.ಪಂ ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಯಂಗಾಡಿ, ಸದಸ್ಯರು, ಉಪನ್ಯಾಸಕ ಮಂಜುನಾಥ ಕೊಕ್ಕರಗೊಂದಿ, ಮುಖ್ಯ ಶಿಕ್ಷಕಿ ಜೆ.ಎಸ್. ಹಿರೇಮಠ ಹಾಗೂ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.