ವಿಜಯಸಾಕ್ಷಿ ಸುದ್ದಿ, ಗದಗ: ಐ.ಸಿ.ಎ.ಆರ್–ಕೆ.ಎಚ್. ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ ಕೋಚಿನ್ ಇವರ ಸಂಯುಕ್ತಾಶ್ರಯದಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೋಡಂಬಿ ಬೆಳೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗರಾಜಪ್ಪ ಅಡಿವೆಪ್ಪಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗೋಡಂಬಿ ಬೆಳೆಯು ಅತೀ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದ್ದು, ಗದಗ ಜಿಲ್ಲೆಯ ವಾತಾವರಣ ಈ ಬೆಳೆಗೆ ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಮೇಗೌಡ ಜಿ.ಕೆ ಗೋಡಂಬಿ ಬೆಳೆಯಲ್ಲಿ ಬರುವ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಗದಗ ಜಿಲ್ಲೆಯ ಗೋಡಂಬಿ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಆರ್. ಓದುಗೌಡರ್ ಮಾತನಾಡಿ, ಗದಗ ಜಿಲ್ಲೆಯಲ್ಲಿ ಬೆಳೆಯುವ ಗೋಡಂಬಿಯು ಉತ್ಕೃಷ್ಟ್ ಗುಣಮಟ್ಟದ್ದಾಗಿದ್ದು, ರಫ್ತು ಮಾಡಲು ಯೋಗ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹೆಯಿಂದ ಹುಲಕೋಟಿಯಲ್ಲಿ ಗೋಡಂಬಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದ್ದು, ಇದರಿಂದ ಗೋಡಂಬಿ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯುತ್ತಿದೆ ಎಂದರು.
ಗೋಡಂಬಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಈಶ್ವರಪ್ಪ ಹಂಚಿನಾಳ ಗೋಡಂಬಿ ಬೆಳೆಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು. ಗದಗ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರಾದ ಶಶಿಕಾಂತ ಕೋಟೆಮನಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವ್ಹಿ.ಮಂಕಣಿ ಮಾತನಾಡಿದರು.
ಎನ್.ಎಚ್. ಭಂಡಿ ಸ್ವಾಗತಿಸಿದರು. ಹೇಮಾವತಿ ಹಿರೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ವಿನಾಯಕ ನಿರಂಜನ್ ನಿರೂಪಿಸಿದರು. ಡಾ. ಕೆ.ವ್ಹಿ. ಪಾಟೀಲ ವಂದಿಸಿದರು. ಹುಲಕೋಟಿ ಗ್ರಾಮದ ಪ್ರಗತಿಪರ ರೈತರಾದ ವಿಶ್ವನಾಥಗೌಡ ಹಿರೇಗೌಡರ್, ಸುಭಾಸಗೌಡ ಆದಪ್ಪಗೌಡರ್, ಕೆ.ವ್ಹಿ. ಆದಪ್ಪಗೌಡರ್ ಇನ್ನಿತರರು ಉಪಸ್ಥಿತರಿದ್ದರು.
ಗದಗ ಜಿಲ್ಲೆಯ ಸುಮಾರು 140ಕ್ಕೂ ಹೆಚ್ಚು ಗೋಡಂಬಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.