ಬೆಂಗಳೂರು:- ಜಾತಿಗಣತಿ ನಮೂನೆಯಿಂದ 33 ಕ್ರಿಶ್ಚಿಯನ್ ಜಾತಿಗಳನ್ನು ಕೈಬಿಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯಾದ್ಯಂತ ನಡೆಯಲಿದ್ದು, ಇದರಲ್ಲಿ ಪಟ್ಟಿ ಮಾಡಿರುವ 1,561 ಜಾತಿಗಳ ಪೈಕಿ 33 ಜಾತಿಗಳನ್ನು ಕೈಬಿಡಲಾಗಿದೆ ಎಂದು ಪ್ರಕಟಿಸಿದರು.
ಈ ಹಿಂದಿನ ಕಾಂತರಾಜು ಆಯೋಗದ ಸಮೀಕ್ಷೆಯಲ್ಲಿ ಇದ್ದ ಮಾಹಿತಿ, ಕಲಂಗಳನ್ನೇ ಉಪಯೋಗಿಸಿಕೊಂಡು ಸರ್ವೇ ಮಾಡಲಾಗುತ್ತಿದೆ. ಇದರಿಂದ ಕಾನೂನು ಉಲ್ಲಂಘನೆ ಆಗಿಲ್ಲ. ಈ ಮಾಹಿತಿಯನ್ನು ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳನ್ನು ಪಟ್ಟಿ ಮಾಡುತ್ತೇವೆ ಹೊರತು ಬೇರೆ ಉದ್ದೇಶಕ್ಕಾಗಿ ಉಪಯೋಗ ಮಾಡುವುದಿಲ್ಲ ಎಂದರು. ಇನ್ನೂ, ಈ ಹಿಂದೆಯೇ ಆಯೋಗ ಸಮೀಕ್ಷೆ ನಡೆಸುವ ಮೊದಲೇ ಬಿಟ್ಟು ಹೋದ ಜಾತಿಗಳನ್ನು ಗಮನಕ್ಕೆ ತನ್ನಿ ಎಂದು ಜಾಗೃತಿ ಮೂಡಿಸುವ ಪ್ರಕಟನೆಯೊಂದನ್ನು ಸಾರ್ವಜನಿಕವಾಗಿ ಪ್ರಕಟಿಸಿತ್ತು.ಇದಾದ ಬಳಿಕ ಅನೇಕರು ತಮ್ಮ ಜಾತಿಗಳನ್ನು ಪರಿಗಣಿಸುವಂತೆ ಕೋರಿದ್ದರು. ಅದರಂತೆ 148 ಜಾತಿಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.
ಇನ್ನೂ, ಜಾತಿ ಕೈಬಿಡಲಾಗಿದೆ ಎಂದು ಯೋಚನೆ ಮಾಡುವ ಅಗತ್ಯವಿಲ್ಲ. ಅರ್ಹ ಜಾತಿಯವರು ತಮ್ಮ ಮೂಲವನ್ನು ಸಮೀಕ್ಷೆದಾರರಿಗೆ ತಿಳಿಸಿ ಉಲ್ಲೇಖ ಮಾಡಬಹುದು ಎಂದೂ ಅವರು ತಿಳಿಸಿದರು.