ಜಾತಿ ಗಣತಿ ನಮ್ಮ ಅಳಿವು-ಉಳಿವಿನ ಪ್ರಶ್ನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಒಳಮೀಸಲಾತಿ ಸಂಬಂಧ ಗಣತಿದಾರರು ಮನೆ–ಮನೆಗೆ ಬಂದಾಗ ಭೋವಿ ಜನಾಂಗದವರು ಕಡ್ಡಾಯವಾಗಿ ‘ಭೋವಿ ಅಥವಾ ವಡ್ಡರ್’ ಎಂದೇ ಬರೆಸಬೇಕು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.

Advertisement

ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯ ಭೋವಿ-ವಡ್ಡರ ಜನಜಾಗೃತಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಾತಿ ಕಾಲಂನಲ್ಲಿ ಭೋವಿ ಅಥವಾ ವಡ್ಡರ ಬರೆಯಿಸಿದಾಗ ಉಪಜಾತಿ (ಅನ್ವಯಿಸುವುದಿಲ್ಲ) ಬರೆಯುವ ಅಗತ್ಯವಿಲ್ಲ. ನಿಮ್ಮ ಮನೆತನದ ಹೆಸರು, ಅಡ್ಡ ಹೆಸರು, ಗೋತ್ರದ ಹೆಸರು, ಬೆಡಗಿನ ಹೆಸರು ಬರೆಯಿಸುವ ಅಗತ್ಯವಿಲ್ಲ ಹಾಗೂ ಅವು ಜಾತಿಗಳ ಕಾಲಂನಲ್ಲಿ ಬರುವುದಿಲ್ಲ. ಕುಲಕಸುಬಿನ ಕಾಲಂನಲ್ಲಿ ಕಲ್ಲುಕುಟಿಗರು, ಕಲ್ಲು ಕೆತ್ತುವವರು, ಶಿಲ್ಪಿ, ಬೀಸುವ ಕಲ್ಲು ತಯಾರಕರು, ದುರಸ್ತಿ ಮಾಡುವವರು ಹಾಗೂ ಕುಲ ಕಸುಬಿನ ಇತರೆ ಕಾಲಂನಲ್ಲಿ ಕೆರೆ, ಬಾವಿ, ನಾಲೆ, ಕುಡಿನೀರುಕಟ್ಟೆ, ರಿವಿಟ್ ಮೆಂಟ್ (ಮಣ್ಣು ಕೊಚ್ಚಿ ಹೋಗದಂತೆ ತಡೆಯುವುದು) ಆಯಪಾಯ, ಮಣ್ಣಿನ ಕೆಲಸ ಬರೆಯಿಸುವುದು ಎಂದರು.

ಈ ಗಣತಿಯು ಚುನಾವಣೆ ಗಣತಿಯಲ್ಲ, ಭೋವಿ/ವಡ್ಡರ ಅಳಿವು-ಉಳಿವಿನ ಪ್ರಶ್ನೆ. ಹಾಗಾಗಿ ಗಣತಿದಾರರಿಗೆ ತಪ್ಪದೇ ಮಾಹಿತಿ ನೀಡಿ. ಬೇರೆ-ಬೇರೆ ಕಡೆ ಇರುವವರನ್ನು ಭಾಗವಹಿಸುವಂತೆ ಬಂಧುಗಳು ಸಂಪರ್ಕಿಸಲು ತಿಳಿಹೇಳಿದರು.

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಭೋವಿ ಕೂಡಾ ಒಂದಾಗಿದೆ. ಆದರೆ, ಭೋವಿಯನ್ನು ಉಪ ಜಾತಿಯಾಗಿ ದಾಖಲು ಮಾಡಬೇಕೆಂದು ಸಮೀಕ್ಷೆದಾರರೇ ಹಲವು ಕಡೆ ಹೇಳುತ್ತಿದ್ದು, ಅಂಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲ ದತ್ತಾಂಶ ಪರಿಶೀಲಿಸಿ ಉಪ ಜಾತಿಯ ಕಾಲಂನಲ್ಲಿ ಭೋವಿ ಎಂದು ಇರುವುದನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭೋವಿ ಸಮಾಜದ ಪ್ರಮುಖರಾದ ಹುಚ್ಚಪ್ಪ ಸಂದಕದ, ಜಯಕ್ಕ ಕಳ್ಳಿ, ಸಹದೇವ ಕೋಟಿ, ರಾಜು ಕಳ್ಳಿ, ಬಸವರಾಜ ಗದಗಿನ, ಹಿರಿಯರಾದ ಹೊನ್ನಪ್ಪ ವಡ್ಡರ, ಈರಪ್ಪ ವಡ್ಡರ, ತಿಮ್ಮಣ್ಣ ಡೋಣಿ, ರಾಜು ಪೂಜಾರ, ಸೋಮು ಗುಡಿ, ದುರಗಪ್ಪ ಡೋಣಿ, ಹನಮಂತಪ್ಪ ಶಿರುಂದ, ಶಂಕರಪ್ಪ ಪೂಜಾರ, ರಾಮಣ್ಣ ಪೂಜಾರ, ಮುದಕಪ್ಪ ಬಂಡಿವಡ್ಡರ, ಮುತ್ತಣ್ಣ ಪೂಜಾರ, ತಿಮ್ಮಣ್ಣ ಪೂಜಾರ, ಅಡಿವೆಪ್ಪ ಉಮಚಗಿ, ಶ್ರೀಕಾಂತ ಸುರೇಬಾನ, ಪರಶುರಾಮ ಬೆಟಗೇರಿ ಸೇರಿದಂತೆ ಭೋವಿ ಸಮಾಜದ ಯುವಕರು, ಮಹಿಳೆಯರು ಇದ್ದರು.

ಗದಗ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ಎಲ್. ಗುಂಜೀಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೋವಿ ಸಮಾಜದ ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರ ವಂದಿಸಿದರು.

ಅಧಿಕಾರಿಗಳ ಎಡವಟ್ಟಿನಿಂದ ಬಹಳ ಕಡೆಗಳಲ್ಲಿ ಪಡಿತರ ಚೀಟಿಯಲ್ಲಿ ಪರಿಶಿಷ್ಟ ಜಾತಿಯ ಬದಲು ಪರಿಶಿಷ್ಟ ಪಂಗಡ ಎಂದು ನಮೂದಾಗುತ್ತಿದೆ. ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಇವರು ಸಮೀಕ್ಷೆಯಲ್ಲಿ ಭಾಗವಹಿಸದಂತಾಗಿದೆ. ಪಡಿತರ ಚೀಟಿಯಲ್ಲಿ ಇಂತಹ ಲೋಪ ಇದ್ದಾಗ ಅವರು ಮತದಾರರ ಚೀಟಿ ಅಥವಾ ಆಧಾರ್ ಕಾರ್ಡ್ ಇಲ್ಲವೇ ಜಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಗಣತಿ ಮಾಡಬೇಕು. ಇಲ್ಲದೇ ಇದ್ದರೆ ಭೋವಿ ಸಮುದಾಯದ ಅನೇಕ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಎಲ್ಲ ದೋಷಗಳನ್ನು ಸರಿಪಡಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here