ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮನೆಮನೆ ಗಣತಿ ಕಾರ್ಯ ನಾಳೆ ಅಂತ್ಯಗೊಳ್ಳಲಿದೆ.
ಆದರೆ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರು ನವೆಂಬರ್ 10ರವರೆಗೆ ಆನ್‌ಲೈನ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಪ್ರಕಟಣೆಯ ಪ್ರಕಾರ, https://kscbcselfdeclaration.karnataka.gov.in ಲಿಂಕ್ ಬಳಸಿ ನಾಗರಿಕರು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.
ಈ ಸಮೀಕ್ಷೆ ಸೆಪ್ಟೆಂಬರ್ 22ರಂದು ಆರಂಭವಾಗಿದ್ದು, ಮೊದಲಿಗೆ ಅಕ್ಟೋಬರ್ 7ರೊಳಗೆ ಮುಗಿಸಲು ಯೋಜಿಸಲಾಗಿತ್ತು. ಆದರೆ ಕಾರ್ಯ ನಿಧಾನಗತಿಯಲ್ಲಿದ್ದರಿಂದ ಅವಧಿಯನ್ನು ಮೊದಲು ಅಕ್ಟೋಬರ್ 18ರವರೆಗೆ, ನಂತರ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಯಿತು.
ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ಸಮೀಕ್ಷೆ ನಿಧಾನವಾಗಿ ಸಾಗುತ್ತಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದರು. ನಿಗದಿತ ಗುರಿ 16 ಮನೆಗಳು ನೀಡಿದ್ದರೂ ಸರಾಸರಿ 7–8 ಮನೆಗಳಷ್ಟೇ ಗಣತಿ ನಡೆದಿರುವುದಾಗಿ ವರದಿಯಾಗಿದೆ.
ಜಾತಿ ಗಣತಿಯನ್ನು ಕುರಿತು ರಾಜ್ಯದಲ್ಲಿ ಪರ–ವಿರೋಧ ಚರ್ಚೆಗಳು ನಡೆದಿದ್ದು, ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ ಸಮೀಕ್ಷೆಗೆ ತಡೆ ನೀಡುವುದನ್ನು ನಿರಾಕರಿಸಿ, ಕೆಲವು ಷರತ್ತುಗಳೊಂದಿಗೆ ಸಮೀಕ್ಷೆ ಮುಂದುವರಿಸಲು ಅನುಮತಿ ನೀಡಿತ್ತು.


