ಬೆಂಗಳೂರು:- ಕರ್ನಾಟಕದಲ್ಲಿ ಜಾತಿಗಣತಿ ಎಂಬ ವಿವಾದದ ಕಿಡಿ ಹೊತ್ತಿದೆ. ಈ ಕುರಿತು ಚರ್ಚಿಸಲು ಇಂದು ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟವು ಯಾವುದೇ ಪ್ರಮುಖ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗರು ಶಾಸಕರು ಜಾತಿಗಣತಿ ವರದಿಯನ್ನು ಬಲವಾಗಿ ವಿರೋಧಿಸಿದ್ದಾರೆ ಎನ್ನಲಾಗಿದೆ.
ಒಕ್ಕಲಿಗ, ಲಿಂಗಾಯತ ಸಮುದಾಯದ ಸಚಿವರ ವಿರೋಧ ಹಿನ್ನಲೆಯಲ್ಲಿ ಇಂದಿನ ಕ್ಯಾಬಿನೆಟ್‌ನಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಕ್ಕಲಿಗ ಸಚಿವರು ಈಗಿರುವ ಅಂಕಿ ಸಂಖ್ಯೆ ಒಪ್ಪಲು ಸಾಧ್ಯವಿಲ್ಲ. ನಮ್ಮ ಸಮುದಾಯವನ್ನು ಬೇರೆ ಬೇರೆ ಕ್ಲಾಸ್ ಗಳಲ್ಲಿ ಗುರುತಿಸಲಾಗಿದೆ. ಎಲ್ಲಾ ಕ್ಲಾಸ್ ಗಳಲ್ಲಿ ಬೇರೆ ಬೇರೆ ಅಗಿ ಗುರುತಿಸಿರುವ ಸಮುದಾಯವನ್ನು ಒಟ್ಟಿಗೆ ಸೇರಿಸಿ ಸರಿಪಡಿಸಿ ಘೋಷಣೆ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ಮರು ಸಮೀಕ್ಷೆ ಮಾಡುವುದು ಅನಿವಾರ್ಯ. ಇದು ನಮ್ಮ ಸಮುದಾಯದ ನಿಲುವು ಎಂದು ಕ್ಯಾಬಿನೆಟ್ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗಾಯತ ಸಮುದಾಯದ ಸಚಿವರು ಕೆಲವು ದಾಖಲೆಯನ್ನು ಮುಂದಿಟ್ಟು ವಿರೋಧಿಸಿದ್ದಾರೆ. ನಮ್ಮ ಸಮುದಾಯ ಸಂಖ್ಯೆ 11% ಎಂದು ವರದಿ ಹೇಳುತ್ತಿದೆ. ಆದರೆ 1990ರ ಚಿನ್ನಪ್ಪ ರೆಡ್ಡಿ ಆಯೋಗವೇ ನಮ್ಮ ಸಮುದಾಯ 17% ಎಂದು ವರದಿ ಕೊಟ್ಟಿದೆ. ನಮ್ಮ ಅಂದಾಜಿನ ಪ್ರಕಾರ ನಮ್ಮ ಎಲ್ಲಾ ಉಪ ಜಾತಿಗಳು ಸೇರಿ ರಾಜ್ಯದಲ್ಲಿ 22% ಇದ್ದೇವೆ. ಆದರೆ ಈ ವರದಿ ಕೇವಲ 11% ಕೊಟ್ಟಿದ್ದನ್ನು ನಮ್ಮ ಸಮುದಾಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಎಸ್‌ಎಸ್ ಮಲ್ಲಿಕಾರ್ಜುನ ಅವರು ಜಾತಿ ಜನಗಣತಿಯನ್ನು ಏರು ಧ್ವನಿಯಲ್ಲಿ ತೀವ್ರವಾಗಿ ವಿರೋಧಿಸಿದ್ದಾರೆ ಎನ್ನಲಾಗಿದ್ದು, ಮುಸ್ಲಿಮರಲ್ಲೂ ಹಲವಾರು ಉಪ ಪಂಗಡಗಳಿವೆ ಎಲ್ಲವನ್ನೂ ಯಾಕೆ ಒಂದರಲ್ಲೇ ಸೇರಿಸಿದ್ದೀರಿ ಎಂದು ಎಸ್ ಎಸ್ ಮಲ್ಲಿಕಾರ್ಜುನ ಪ್ರಶ್ನಿಸಿ ಕಿಡಿಕಾರಿದ್ದಾರೆ. ಈ ವೇಳೆ ಯಾವ ವರ್ಗಕ್ಕೆ ಅನ್ಯಾಯ ಆಗಿದೆಯೋ ಅದನ್ನು ಸೇರಿಸಲು ಅವಕಾಶ ಇದೆ ಎಂದು ಹೇಳುವ ಮೂಲಕ ಸಂತೋಷ್ ಲಾಡ್ ಸಚಿವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ವಿವಿಧ ಸಮುದಾಯಗಳು, ವಿಶೇಷವಾಗಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು ಈ ಜಾತಿ ಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಇದನ್ನು “ಅವೈಜ್ಞಾನಿಕ” ಎಂದು ಕರೆದಿದ್ದಾರೆ. ಅಲ್ಲದೆ ವರದಿಯನ್ನು ತಿರಸ್ಕರಿಸಬೇಕು ಮತ್ತು ಹೊಸ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ಮೇ 2 ರಂದು ನಡೆಯುವ ಮುಂದಿನ ಸಚಿವ ಸಂಪುಟದಲ್ಲಿ ಮತ್ತೆ ಜಾತಿ ಗಣತಿ ವರದಿ ಜಾರಿ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಕಾನೂನು ಸಚಿವರು ಹೇಳಿದ್ದೇನು?
ಮತ್ತೊಂದೆಸೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ 2025ರ ದತ್ತಾಂಶ ಅಧ್ಯಯನ ವರದಿಯನ್ನು ಇವತ್ತು ರಾಜ್ಯ ಸಚಿವ ಸಂಪುಟ ಚರ್ಚಿಸಲಾಗಿದೆ. ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ತಾಂತ್ರಿಕ ವಿವರಗಳು ಚರ್ಚೆಗೆ ಅವಶ್ಯ ಅಗತ್ಯ ಎಂದು ಅನಿಸಿದೆ. ಅವುಗಳನ್ನು ಒದಗಿಸಲು ಚರ್ಚೆ ಅಪೂರ್ಣವಾಗಿದೆ. ಸೌಹಾರ್ದವಾದ ವಾತಾವರಣದ ಚರ್ಚೆಯಲ್ಲಿ ಹಲವಾರು ವಿಷಯಗಳನ್ನು ಮಂಡಿಸಿದ್ದೇವೆ. ಜನಸಂಖ್ಯೆ ಹಿಂದುಳಿದಿರುವಿಕೆ ಏನೇನು ಪ್ಯಾರಾಮೀಟರ್ಸ್ ತೆಗೆದುಕೊಂಡಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ ಏನೇನು ವಿವರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚರ್ಚೆ ಮಾಡಲಾಗಿದೆ. ಈ ಬಗ್ಗೆ ಮೇ 2ರಂದು ನಡೆಯುವ ಸಂಪುಟ ಸಭೆಯಲ್ಲಿ ಇನ್ನಷ್ಟು ಚರ್ಚೆ ನಡೆಯಲಿದೆ ಎಂದರು.