HomeGadag Newsಪಟ್ಟಣದಾದ್ಯಂತ ಸಿ.ಸಿ ಕ್ಯಾಮರಾ ಕಣ್ಗಾವಲು

ಪಟ್ಟಣದಾದ್ಯಂತ ಸಿ.ಸಿ ಕ್ಯಾಮರಾ ಕಣ್ಗಾವಲು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣ ವ್ಯಾಪ್ತಿಯಲ್ಲಿ ಈವರೆಗೆ ಸಮರ್ಪಕವಾಗಿ ಸಿ.ಸಿ ಕ್ಯಾಮರಾ ವ್ಯವಸ್ಥೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಕಳ್ಳತನ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚುವಲ್ಲಿ, ಸಂಚಾರಿ ನಿಯಮಗಳ ಮೇಲಿನ ಕಣ್ಗಾವಲು, ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದ್ದು, ಇದೀಗ ಶಿರಹಟ್ಟಿ ಪಟ್ಟಣದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ.

ಶಿರಹಟ್ಟಿಯ ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರರ ನೇತೃತ್ವದಲ್ಲಿ ಮೇಲಧಿಕಾರಿಗಳ ನಿರ್ದೇಶನದಂತೆ ಶಿರಹಟ್ಟಿ ಪಟ್ಟಣದ ಟಿಪ್ಪು ಸರ್ಕಲ್, ಆಸಾರ್ ಕ್ರಾಸ್, ಜುಮ್ಮಾ ಮಸೀದಿ, ಮದೀನಾ ಮಸೀದಿ, ಕನಕದಾಸರ ಸರ್ಕಲ್, ನೆಹರು ಸರ್ಕಲ್, ಗಾಂಧೀಜಿ ಸರ್ಕಲ್ ಸೇರಿದಂತೆ ಶಿರಹಟ್ಟಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ 20ಕ್ಕೂ ಹೆಚ್ಚು ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಅವುಗಳನ್ನು ನಿರಂತರವಾಗಿ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪಟ್ಟಣದಲ್ಲಿ ಸಮರ್ಪಕ ಸಿಸಿ ಕ್ಯಾಮರಾ ಅಳವಡಿಕೆ ಇಲ್ಲದೇ ಇರುವುದರಿಂದ ಕೆಲವರು ಸಂಚಾರಿ ನಿಯಮಗಳನ್ನು ಪಾಲಿಸದೇ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದರು. ಇಂತಹವರಿಗೆ ಇನ್ನು ಮುಂದೆ ಇಲಾಖೆ ದಂಡ ಪ್ರಯೋಗ ಮಾಡಲು ವ್ಯವಸ್ಥೆ ಮಾಡಿಕೊಂಡಿದೆ. ಇದರೊಂದಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದವರ ಪತ್ತೆಗೆ ಸುಲಭವಾಗುವುದರ ಜೊತೆಗೆ ಇದೀಗ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್ ಹಬ್ಬದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ತಂತ್ರಜ್ಞಾನದ ನೆರವಿನಿಂದ ವ್ಯವಸ್ಥೆಯನ್ನು ಬಿಗಿಗೊಳಿಸುತ್ತಿದ್ದು, ಇನ್ನು ಮುಂದೆ ಸಾರ್ವಜನಿಕರು ಎಚ್ಚರಿಕೆಯಿಂದಿರುವ ಅಗತ್ಯವಿದೆ.

ಶಿರಹಟ್ಟಿ ಪಟ್ಟಣವು ಕೋಮು-ಸೌಹಾರ್ದತೆಯ ಪ್ರತೀಕವಾಗಿದ್ದು, ಇಲ್ಲಿ ಹಬ್ಬ-ಹರಿದಿನಗಳನ್ನು ಭಾವೈಕ್ಯತೆಯಿಂದ ಆಚರಿಸುತ್ತಾ ಬರಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಇದಕ್ಕೆ ಕಡಿವಾಣವನ್ನು ಹಾಕಲು ಮುಂದಾಗಿ, ಕಳ್ಳತನದಲ್ಲಿ ಭಾಗಿಯಾದ ಅಂತಾರಾಜ್ಯ ಕಳ್ಳರನ್ನು ಸಹ ಬಂಧಿಸಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಪರಾಧ ಪ್ರಕರಣಗಳ ಶೀಘ್ರ ಪತ್ತೆ, ಸಂಚಾರಿ ನಿಯಮ ಪಾಲನೆ ಮತ್ತು ಶಾಂತಿ-ಸುವ್ಯವಸ್ಥೆಗೆ ಆದ್ಯತೆ ನೀಡಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಶಿರಹಟ್ಟಿ ಪಟ್ಟಣದ ಬಸವೇಶ್ವರ ವೃತ್ತದಿಂದ ನೆಹರು ವೃತ್ತದವರೆಗೆ ದಿನಕ್ಕೆ ಒಂದು ಬದಿ ರಸ್ತೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ರಸ್ತೆಯು ಇಕ್ಕಟ್ಟಾಗಿದ್ದರಿಂದ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗಳು ನಿತ್ಯವೂ ಸಂಚಾರ ವ್ಯವಸ್ಥೆಗೆ ಹರಸಾಹಸ ಪಡುತ್ತಿದ್ದಾರೆ. ಇದರ ಜೊತೆಗೆ ನೆಹರು ವೃತ್ತ, ಬಸ್ ನಿಲ್ದಾಣದ ಸುತ್ತಮುತ್ತ, ತಹಸೀಲ್ದಾರ ಕಚೇರಿ ಸುತ್ತಮುತ್ತಲೂ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜುಗಳು ಬಿಟ್ಟ ನಂತರ ಈ ರಸ್ತೆಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆಯೂ ಸಹ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅವಕಾಶವನ್ನು ಮಾಡಿಕೊಡಬೇಕೆಂದು ಪಟ್ಟಣದ ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಕಳ್ಳತನ ಪ್ರಕರಣ ಪತ್ತೆಗೆ, ಸಂಚಾರಿ ನಿಯಮ ಪಾಲನೆಗೆ ಹಾಗೂ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಿದ್ದು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಇಲ್ಲದಿದ್ದರೆ ಕಾನೂನಿನ ಪ್ರಕಾರ ಕ್ರಮ ವಹಿಸಲಾಗುವುದು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!