ಬೆಂಗಳೂರು: ಬೆಂಗಳೂರಿನಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ದಾಳಿ ನಡೆಸಿ ನೈಜೀರಿಯಾ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಬಂಧಿತ ಆರೋಪಿ. ಮಾರತ್ತಹಳ್ಳಿ ಸಮೀಪದ ಮುನೆಕೊಳಲುವಿನ ಬಾಡಿಗೆ ಮನೆಯಿಂದ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಹಾಗೂ 300 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗ, ಈತನ ಚಲನವಲನಗಳ ಮೇಲೆ ನಿಗಾ ಇಟ್ಟು ದಾಳಿ ನಡೆಸಿದೆ. ಆರೋಪಿ, ಈ ಹಿಂದೆ ಕಾಡುಗೋಡಿ ಹಾಗೂ ಹೆಣ್ಣೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಅಕ್ರಮ ಚಟುವಟಿಕೆ ಆರಂಭಿಸಿದ್ದಾನೆ ಎನ್ನಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಡ್ರಗ್ಸ್ ಪೂರೈಕೆ ಜಾಲ ಮತ್ತು ಇತರ ಆರೋಪಿಗಳ ಕುರಿತು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



