ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಕರ್ತೃ ಶ್ರೀ ಜ.ಫಕೀರೇಶ್ವರರ ತಪೋಭೂಮಿಯಾಗಿದ್ದು, ಇಲ್ಲಿ ಎಲ್ಲ ಹಬ್ಬ-ಹರಿದಿನಗಳು ಭಾವೈಕ್ಯತೆಯಿಂದ ಕೂಡಿರುವುದು ವಿಶೇಷ. ಮುಂಬರುವ ವಿಜಯದಶಮಿಯ ಬನ್ನಿ ವಿನಿಮಯ ಮತ್ತು ಹಜರತ್ ಮೆಹಬೂಬಸುಬಾನಿ ಉರುಸು ಹಬ್ಬಗಳನ್ನು ಸಹ ಈ ಹಿಂದಿನ ಹಾಗೆ ಭಾವೈಕ್ಯತೆಯಿಂದ ಆಚರಿಸಬೇಕೆಂದು ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ತಾ.ಪಂ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದಕ್ಕೆ ಆದ್ಯತೆ ನೀಡಿ ಅದಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ವಿಜಯದಶಮಿ ನಿಮಿತ್ತ ಅ.2ರಂದು ಸಂಜೆ ಜ.ಫ. ಸಿದ್ದರಾಮ ಸ್ವಾಮೀಜಿ ಬನ್ನಿಮುಡಿಯುವ ಕಾರ್ಯಕ್ರಮ, ರಾತ್ರಿ ಉರುಸು ನಿಮಿತ್ತ ಝಂಡಾ ಏರಿಸುವ ಕಾರ್ಯಕ್ರಮ ಮತ್ತು ಗಂಧ (ಸಂದಲ್) ಇರುವುದರಿಂದ ಪ್ರತಿಯೊಬ್ಬರೂ ಪೊಲೀಸ್ ಇಲಾಖೆಯ ನಿಯಮಾನುಸಾರ, ಕಾನೂನು-ಸುವ್ಯವಸ್ಥೆಗೆ ಧಕ್ಕೆ ಬರದ ರೀತಿಯಲ್ಲಿ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗಿದರೆ ಅಂತಹವರ ಮೇಲೆ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಸಂದೀಪ ಕಪ್ಪತ್ತನವರ, ಅಶ್ರಫ್ ಅಲಿ ಢಾಲಾಯತ, ಚಾಂದಸಾಬ ಮುಳಗುಂದ, ಅಜ್ಜು ಪಾಟೀಲ, ರವಿ ಗುಡಿಮನಿ, ವಿಠ್ಠಲ ಬಿಢವೆ, ಅಲ್ಲಾಭಕ್ಷಿ ನಗಾರಿ, ಜಗದೀಶ ತೇಲಿ, ಸಂತೋಷ ಕುಬೇರ, ಫಕ್ಕೀರೇಶ ನಿಟ್ಟಾಲಿ ಮುಂತಾದವರು ಉಪಸ್ಥಿತರಿದ್ದರು.



