ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬಣ್ಣಗಳ ಹಬ್ಬ ಹೋಳಿಯನ್ನು ಶಾಂತಿಯುತವಾಗಿ ಆಚರಿಸಿ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಯುವಕರು ಏನಾದರೂ ಪುಂಡಾಟಿಕೆ ತೋರಿದರೆ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದೆಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಹೋಳಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ಆತ್ಮೀಯರಿಗೆ ಬಣ್ಣ ಎರಚಿ ಸಂತೋಷಪಡಿ. ಅನಾವಶ್ಯಕವಾಗಿ ಅಪರಿಚಿತರಿಗೆ, ಸರಕಾರಿ ಆಸ್ತಿಗೆ ಏನಾದರೂ ಹಾನಿ ಮಾಡಲು ಮುಂದಾದರೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ವಿಷಯವನ್ನು ಇಂದಿನ ಈ ಶಾಂತಿ ಸಭೆಗೆ ಬಂದಿರುವ ಹಿರಿಯರು ನಿಮ್ಮ ಓಣಿಯಲ್ಲಿನ ಯುವಕರಿಗೆ ತಿಳಿಸಿ ಎಂದರು.
ಪಿಎಸ್‌ಐ ಐಶ್ವರ್ಯ ನಾಗರಾಳ ಮಾತನಾಡಿ, ಹೋಳಿ ಹಬ್ಬದಲ್ಲಷ್ಟೇ ಅಲ್ಲದೆ ನಿತ್ಯದ ದಿನಗಳಲ್ಲಿಯೂ ನರೇಗಲ್ಲ ಪಟ್ಟಣದಲ್ಲಿ ಶಾಂತಿ-ಸುವ್ಯವಸ್ಥೆಗಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನು ಮುಂದೆ ಯುವಕರು ಬೈಕ್‌ನಲ್ಲಿ ಟ್ರಿಬಲ್ ರೈಡಿಂಗ್ ಹೋದರೆ, ಶಾಲೆ-ಕಾಲೇಜು ಬಿಡುವ ಸಮಯದಲ್ಲಿ ಹುಡುಗಿಯರನ್ನು ಚುಡಾಯಿಸಲು ಮುಂದಾದರೆ ಅಂಥವರನ್ನು ಮುಲಾಜಿಲ್ಲದೆ ಶಿಕ್ಷೆಗೆ ಒಳಪಡಿಸಲಾಗುವುದು. ಆದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕೆಂದರು.
ಸಭೆಯನ್ನುದ್ದೇಶಿಸಿ ಅರುಣ ಕುಲಕರ್ಣಿ, ಮೈಲಾರಪ್ಪ ಚಳ್ಳಮರದ, ಚಂದ್ರು ರಾಠೋಡ ಮತ್ತು ಹನುಮಂತಪ್ಪ ದ್ವಾಸಲ ಮಾತನಾಡಿದರು.ಸಭೆಯಲ್ಲಿ ಶೇಖಪ್ಪ ಜುಟ್ಟಲ, ಯಲ್ಲಪ್ಪ ಮಣ್ಣೊಡ್ಡರ, ಎಂ.ಎಸ್. ಖೇತಗಿ, ಕೆ.ಎಂ. ಸಂಗನಾಳ, ಬಸಪ್ಪ ಗೋಡಿ, ಮಾರುತಿ ಜುಟ್ಲ, ಎಂ.ಬಿ. ಭೂಮನಗೌಡ್ರ, ರಂಗಪ್ಪ ನಾಯ್ಕರ, ಐ.ಐ. ಬಿಸನಳ್ಳಿ, ಯು.ಬಿ. ಕೊತಬಾಳ, ಎಚ್.ಬಿ. ಚಲವಾದಿ, ಮುಕ್ಕಣ್ಣವರ, ಎಂ.ಕೆ. ಗುಂಡಗೋಪುರಮಠ ಮತ್ತಿತರರು ಪಾಲ್ಗೊಂಡಿದ್ದರು. ಆರಕ್ಷಕ ಸಿಬ್ಬಂದಿ ಉಪ್ಪಾರ ನಿರ್ವಹಿಸಿದರು.