ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತ್ಯಾಗ, ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಸ್ನೇಹ, ಸೌಹಾರ್ದತೆ, ಶಾಂತಿಯಿಂದ ಆಚರಿಸಬೇಕು ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜು.1ರಿಂದ ಪ್ರಾರಂಭಗೊಳ್ಳಲಿರುವ ಮೊಹರಂ ಹಬ್ಬದ ಪ್ರಯುಕ್ತ ಕರೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿ, ಹಬ್ಬಗಳ ಆಚರಣೆಯ ನೆಪದಲ್ಲಿ ಯಾವುದಕ್ಕೂ ಅಪಚಾರವಾಗದಂತೆ ಹಬ್ಬಗಳ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಶಿಸ್ತು, ಸಂಯಮ ಮತ್ತು ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸಬೇಕು. ಧರ್ಮ, ಸಂಸ್ಕೃತಿಯ ಪ್ರತೀಕವಾದ ಹಬ್ಬಗಳ ಆಚರಣೆಯ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಶಾಂತಿ-ಸುವ್ಯವಸ್ಥೆ, ಸೌಹಾರ್ದತೆ ಕದಡುವ ಯಾವುದೇ ಘಟನೆಗಳು ಜರುಗಿದರೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ ಗದಗ ಮಾತನಾಡಿ, ಪಟ್ಟಣ ಸೇರಿ ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಎಲ್ಲ ಸಮುದಾಯದವರು ಒಗ್ಗೂಡಿ ಶೃದ್ಧಾ, ಭಕ್ತಿ ವಿಜೃಂಬಣೆಯಿಂದ ಆಚರಣೆ ಮಾಡುತ್ತಾರೆ. ಭಾವೈಕ್ಯತೆಗೆ ಹೆಸರಾದ ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದೆ ಎಲ್ಲರೂ ಸಹೋದರ ಭಾವನೆಯೊಂದಿಗೆ ಶಾಂತ ರೀತಿಯಲ್ಲಿ ಹಬ್ಬದ ಆಚರಣೆ ಮಾಡೋಣ ಎಂದರು.
ಪಿಎಸ್‌ಐ ನಾಗರಾಜ ಗಡದ ಸ್ವಾಗತಿಸಿ ಮಾತನಾಡಿದರು. ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ, ದಾದಾಪೀರ ಮುಚ್ಚಾಲೆ, ಎಸ್.ಕೆ. ಹವಾಲ್ದಾರ್, ಸುರೇಶ ನಂದೆಣ್ಣವರ, ಎಂ.ಎಂ. ಮುಳಗುಂದ, ಶರಣು ಗೋಡಿ, ಇಸ್ಮಾಯಿಲ್ ಆಡೂರ, ಅಮರೇಶ ಗಾಂಜಿ, ಬಸವರಾಜ ಕಲ್ಲೂರ, ದಾದಾಪೀರ ತಂಬಾಕ, ಕಲಂದರ ಸೂರಣಗಿ, ಕಾರ್ತಿಕ ಹಿರೇಮಠ, ಪಕ್ಕೀರೇಶ ಭಜಕ್ಕನವರ ಸೇರಿ ಹಿಂದೂ-ಮುಸ್ಲಿಂ ಭಾಂದವರಿದ್ದರು. ನಂದೀಶ ಮಠಪತಿ ನಿರ್ವಹಿಸಿದರು.