ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿ ಎಸ್.ಎಸ್.ಕೆ. ಸಮಾಜದ ತರುಣ ಸಂಘದ ಉತ್ಸಾಹಿ ಕಾರ್ಯಕರ್ತರಾದ ವಿಷ್ಣು ಅರವಟಗಿ ತಮ್ಮ ಜನ್ಮದಿನಾಚರಣೆಯನ್ನು ಬಡ ಜನರಿಗೆ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಿಸುವ ಮೂಲಕ ಆಚರಿಸುತ್ತ ಬಂದಿದ್ದು, ಈ ವರ್ಷವೂ ಕೂಡ ಅವರು ತಮ್ಮ 57ನೇ ಜನ್ಮದಿನಾಚರಣೆಯನ್ನು ಗದುಗಿನ ಚಾಪೇಕರ ಆಸ್ಪತ್ರೆಯಲ್ಲಿ 6 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವುದರ ಮೂಲಕ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಟಗೇರಿ ಎಸ್.ಎಸ್.ಕೆ ದಸರಾ ಉತ್ಸವ ಸಮಿತಿಯ ಚೇರ್ಮನ್ ಸೋಮಶೇಖರ ಮೇರವಾಡೆ, ವಿಷ್ಣು ಅರವಟಗಿಯವರು ಇಲ್ಲಿಯವರೆಗೆ ಸುಮಾರು 108 ಜನರ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಇವರ ಸಾಮಾಜಿಕ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.
ಬೆಟಗೇರಿ ಎಸ್.ಎಸ್.ಕೆ ಸಮಾಜದ ತರುಣ ಸಂಘದ ಸದಸ್ಯ ಗಣೇಶ ಪವಾರ ಮಾತನಾಡಿ, ಜನರು ತಮ್ಮ ಜನ್ಮದಿನಾಚರಣೆಯನ್ನು ವಿವಿಧ ರೀತಿಯಲ್ಲಿ ಹಣ ಖರ್ಚು ಮಾಡಿ ಆಚರಿಸುವುದನ್ನು ನಾವು ನೋಡಿದ್ದೇವೆ. ಆದರೆ ವಿಷ್ಣು ಅರವಟಗಿಯವರು ತಮ್ಮ ದಿನಾಚರಣೆಯನ್ನು ಬಡಜನರ ನೇತ್ರ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಚರಿಸುತ್ತಿರುವುದು ಮಾದರಿ ಕಾರ್ಯ. ಇವರ ಸಾಮಾಜಿಕ ಸೇವೆಯಲ್ಲಿ ಇವರ ಧರ್ಮಪತ್ನಿ ರೇಖಾ ವಿಷ್ಣು ಅರವಟಗಿ ಹಾಗೂ ಮಕ್ಕಳ, ಕುಟುಂಬದವರ ಸಹಾಯ-ಸಹಕಾರವಿದೆ ಎಂದರು.
ಈ ಸಂದರ್ಭದಲ್ಲಿ ನಾರಾಯಣಸಾ ಕಬಾಡಿ, ಹೀರಾಲಾಲಸಾ ಬಾಕಳೆ, ಭೀಮಸೇನಸಾ ರಾಯಬಾಗಿ, ರಾಜು ಬಸವಾ, ಎಂ.ಯು. ರಾಯಬಾಗಿ, ಸುರೇಶ ಮೇರವಾಡೆ, ನಾಗರಾಜ ರಾಯಬಾಗಿ, ವಿನಾಯಕ ಹಾದಿಮನಿ, ಪುಂಡಲೀಕ ಪವಾರ, ಕಿರಣ ದಾನಿ, ವಿಠ್ಠಲ ಅರವಟಗಿ, ಪವನ ಅರವಟಗಿ, ಹರೀಶ ಅರವಟಗಿ ಮುಂತಾದವರು ಉಪಸ್ಥಿತರಿದ್ದರು.
ಎ.ಯು. ರಾಯಬಾಗಿ ಮಾತನಾಡಿ, ವಿಷ್ಣು ಅರವಟಗಿಯವರು ತಮ್ಮ ಜೀವನವನ್ನು ಸಾಮಾಜಿಕ ಸೇವೆಗೆ ಮುಡುಪಾಗಿಟ್ಟಿದ್ದು, ದಾನ-ಧರ್ಮ ಮಾಡುವ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಅಲ್ಲದೆ ಅವರು ತಮ್ಮ ದೇಹದಾನವನ್ನು ಕೂಡ ಮಾಡಿದ್ದಾರೆ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಮರಣಾನಂತರವೂ ತಮ್ಮ ದೇಹವು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಉಪಯುಕ್ತವಾಗಬೇಕು ಎಂಬ ಅವರ ನಿರ್ಧಾರ ಶ್ಲಾಘನೀಯ ಎಂದರು.



