ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ಬಂತೆಂದರೆ, ರೈತರಿಗೆ ಎಲ್ಲಿಲ್ಲದ ಸಂಭ್ರಮಾಚರಣೆ. ಗುರುವಾರ ಸಂಜೆ ರೈತರು ತಮ್ಮ ತಮ್ಮ ಎತ್ತುಗಳನ್ನು ಪೂಜಿಸುವ ಮೂಲಕ ಹೊನ್ನುಗ್ಗಿ ಆಚರಣೆ ಮಾಡಿ ಕಾರ ಹುಣ್ಣಿಮೆ ದಿನದಂದು ಸಾಯಂಕಾಲ ಕರಿ ಹರಿಯುವ ಮೂಲಕ ಕಾರಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.
ಮುಳಗುಂದ ಪಟ್ಟಣದ ಅಗಸಿ ಬಾಗಿಲುಗಳಿಗೆ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರೈತರು ಕರಿ ಹರಿಯುವ ಎತ್ತುಗಳನ್ನು ಅಲಂಕರಿಸಿ, ಎತ್ತುಗಳ ಕರಿ ಹರಿಯುವ ಸ್ಥಳಕ್ಕೆ ಒಂದೊಂದಾಗಿ ಆಗಮಿಸುತ್ತಿದ್ದಂತೆ ರೈತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಎತ್ತುಗಳ ಕರಿ ಹರಿಯುವ ಸಮಯದಲ್ಲಿ ಅಗಸಿಯಲ್ಲಿ ಬೇವಿನ ಕೊಂಬೆ ಹಾಗೂ ಕೊಬ್ಬರಿ ಬಟ್ಟಲು ಹುರಿ ಹಿಡಿಯಲಾಗಿತ್ತು. ಈಆಧಾರದಲ್ಲಿ ಪ್ರಸ್ತುತ ವರ್ಷದ ಫಸಲು ಲೆಕ್ಕಾಚಾರ ನಡೆಯಿತು.
ಈ ಬಾರಿ ಸಂಗಪ್ಪ ಬಶೆಟ್ಟೆಪ್ಪ ಸುಂಕಾಪೂರ ಅವರ ಬಿಳಿ ಎತ್ತು ಕರಿ ಹರಿಯಿತು. ಬಿಳಿ ಎತ್ತು ಕರಿ ಹರಿದಿರುವುದರಿಂದ ಈ ವರ್ಷ ಮುಂಗಾರು, ಹಿಂಗಾರು ಮಳೆ ಬೆಳೆ ಸಮೃದ್ಧಿಯಾಗಿ ಬೆಳೆ ಬರುವುದು ಎಂಬುದು ರೈತರ ಅಭಿಪ್ರಾಯವಾಗಿತ್ತು.