HomeArt and Literatureಧನುರ್ಮಾಸದ ಆಚರಣೆ, ಅದರ ಮಹತ್ವ

ಧನುರ್ಮಾಸದ ಆಚರಣೆ, ಅದರ ಮಹತ್ವ

For Dai;y Updates Join Our whatsapp Group

Spread the love

ವರ್ಷದ ಕೊನೆಯ ತಿಂಗಳು ಕೊರೆಯುವ ಚಳಿಯಲ್ಲಿಯೇ ಧನುರ್ಮಾಸದ ಆರಂಭವಾಗಿದೆ. ಈ ವರ್ಷ ಧನುರ್ಮಾಸವು ಡಿಸೆಂಬರ್ 16ರಿಂದ ಪ್ರಾರಂಭವಾಗಿದ್ದು, 2026ರ ಜನವರಿ 14ರಂದು ಪೂರ್ಣಗೊಳ್ಳುತ್ತದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ನಸುಕಿನ 4.30ಕ್ಕೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ಸೂರ್ಯೋದಯಕ್ಕಿಂತ ಮೊದಲು ದೇವರನ್ನು ಪೂಜೆ ಮಾಡುವುದೇ ಧನುರ್ಮಾಸದ ಆಚರಣೆಯಾಗಿದೆ. ಆಕಾಶದಲ್ಲಿ ನಕ್ಷತ್ರಗಳು ಕಾಣುತ್ತಿರುವಾಗಲೇ ದೇವಾಲಯಗಳು ಬಾಗಿಲು ತೆರೆದು ಸೂರ್ಯೋದಯಕ್ಕೂ ಮೊದಲೇ ಪೂಜೆಯಾಗಿ ಸಂಪನ್ನಗೊಳ್ಳುತ್ತದೆ. ಇದನ್ನೇ ಧನುರ್ಮಾಸ ಆಚರಣೆ ಎನ್ನಲಾಗುತ್ತದೆ.

ಧನುರ್ಮಾಸ ಎಂದರೆ, ಭಗವಾನ್ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಮಾಸಾನಾಂ ಮಾರ್ಗಶಿರಃ ಎಂದು ತಿಳಿಸಿದ್ದಾರೆ. ಅಂದರೆ ಸನ್ನಿಧಾನ ಫಲ ಧನುರ್ಮಾಸದಲ್ಲಿ ಬಹಳಿರುತ್ತದೆ ಎಂದಿರುತ್ತಾರೆ. ಆದ್ದರಿಂದ ಮಾರ್ಗಶಿರ ಮಾಸದಲ್ಲಿಯೇ ಈ ಧನುರ್ಮಾಸವು ಬಂದು ಬಹಳ ಪವಿತ್ರವಾದದ್ದಾಗಿದೆ. ಮಾರ್ಗಶಿರ ಮಾಸದ ಮಧ್ಯಂತರದಲ್ಲಿ ಆರಂಭವಾಗಿ ಪುಷ್ಯ ಮಾಸದ ಮಧ್ಯಂತರದಲ್ಲಿ ಮುಕ್ತಾಯಗೊಳ್ಳುತ್ತದೆ. ಅಂದರೆ ಧನುರ್ಮಾಸ ಬೇರೆ ಮಾಸಗಳಂತೆ ಪ್ರತ್ಯೇಕ ಮಾಸವಲ್ಲ.

ಸೌರಮಂಡಲದ ರಾಜನಾದ ಸೂರ್ಯದೇವನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಿರುತ್ತಾರೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿಯೇ ಒಂದು ತಿಂಗಳು. ಸೂರ್ಯನು ಧನುರಾಶಿಗೆ ಪ್ರವೇಶಿಸುವ ದಿನದಿಂದ ಆರಂಭಿಸಿ ಮಕರ ರಾಶಿಗೆ ಪ್ರವೇಶಿಸುವ ದಿನದವರೆಗಿನ ಒಂದು ತಿಂಗಳ ಕಾಲವೇ ಈ ಧನುರ್ಮಾಸ.

ಈ ಮಾಸದಲ್ಲಿ ಸೂರ್ಯನು ಒಂದು ತಿಂಗಳು ಧನುರಾಶಿಯಲ್ಲಿಯೇ ಇರುತ್ತಾನೆ. ಆದ್ದರಿಂದ ಈ ಮಾಸಕ್ಕೆ ಧನುರ್ಮಾಸ ಎನ್ನಲಾಗುತ್ತಿದೆ. ಸೂರ್ಯನು ಧನು ರಾಶಿಯನ್ನು ಪ್ರವೇಶಿಸುವ ಕಾಲವನ್ನು ಧನುರ್ ಸಂಕ್ರಮಣ ಎನ್ನಲಾಗುತ್ತದೆ. ಸೂರ್ಯ ಸಂಕ್ರಮಣ ಪ್ರವೇಶ ಮಾಡುತ್ತಿದ್ದಂತೆ ಧನುರ್ ಸಂಕ್ರಮಣ ಕಾಲ ಮುಗಿಯುತ್ತದೆ.

ಧನುರ್ಮಾಸ ದೇವತಾ ಕಾರ್ಯಗಳಿಗೆ ಏಕೆ ಶ್ರೇಷ್ಠವೆಂದರೆ, ನಮ್ಮ ಒಂದು ವರ್ಷ ದೇವಾನುದೇವತೆಗಳಿಗೆ ಒಂದು ದಿನದ ಕಾಲವಾಗಿರುತ್ತದೆ. ಇದನ್ನು ಉತ್ತರಾಯಣ ಕಾಲ ಎಂದು ಕರೆಯಲಾಗುತ್ತದೆ. ಈ ಧನುರ್ಮಾಸವು ದಕ್ಷಿಣಾಯಣದ ಕೊನೆಗೆಯಲ್ಲಿ ಬರುತ್ತದೆ. ಅಂದರೆ ಇದು ದೇವತೆಗಳಿಗೆ ಬ್ರಾಹ್ಮೀ ಮುಹೂರ್ತವಾಗಿರುತ್ತದೆ. ಅಂದರೆ ಎಲ್ಲಾ ದೇವತೆಗಳು ಜಾಗೃತಗೊಳ್ಳುವಂತಹ ಸಮಯ. ದೇವಾನುದೇವತೆಗಳಿಗೆ ಬ್ರಾಹ್ಮೀ ಮುಹೂರ್ತವಾದಂತಹ ಈ ಶ್ರೇಷ್ಠ ಧನುರ್ಮಾಸದಲ್ಲಿ ದೇವತಾರಾಧನೆ ಮಾಡಿದರೆ ಅಕ್ಷಯ ಫಲ ಪ್ರಾಪ್ತಿಯಾಗುತ್ತದೆ.

ಇದರ ಆಚರಣೆಯನ್ನು ಋಷಿಮುನಿಗಳೂ ಅರುಣೋದಯ ಕಾಲದಲ್ಲಿ ಎದ್ದು ಪೂಜಿಸಿದರೆ ಸಾವಿರ ದಿನ ಪೂಜೆ ಮಾಡಿದಷ್ಟೇ ಫಲ ಸಿಗುತ್ತದೆ ಎಂದು ಹೇಳಿದ್ದಾರೆ. ಈ ಪೂಜೆ ಹೇಗೆ ಪ್ರಾರಂಭವಾಯಿತೆಂದರೆ, ಸೂರ್ಯದೇವನೇ ಮೊದಲು ಪ್ರಾರಂಭಿಸುತ್ತಾನೆ. ಇದರ ಆಚರಣೆಯನ್ನು ಋಷಿಮುನಿಗಳು ಅರುಣೋದಯ ಕಾಲದಲ್ಲಿ ದೇವಪೂಜೆ, ಎರಡನೆಯದು ಮಧ್ಯಾಹ್ನ ಅಥವಾ ಹುಗ್ಗಿ ನೈವೇದ್ಯ. ಈ ವೇಳೆಯು ಶ್ರೀಹರಿಯ ಪೂಜೆಗೆ ವಿಶೇಷ ಕಾಲವಾಗಿದೆ.

ಉತ್ಥಾನ ದ್ವಾದಶಿಯಿಂದ ಯೋಗ ನಿದ್ರೆಯಿಂದ ಜಾಗೃತಗೊಳ್ಳುವಂತಹ ವಿಷ್ಣು ದೇವರಿಗೆ ಅರುಣೋದಯ ಕಾಲವಾಗಿದೆ. ಹೀಗಾಗಿ ಧನುರ್ಮಾಸ ಶ್ರೇಷ್ಠವಾಗಿದೆ. ವೈಷ್ಣವ ಸಂಪ್ರದಾಯದಲ್ಲಿ ಈ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ದೇವಾನುದೇವತೆಗಳು ಮಹಾವಿಷ್ಣುವನ್ನು ನೆನೆಯುತ್ತಾರೆ ಎಂಬ ಪ್ರತೀತಿ ಇದೆ. ಈ ಸಮಯದಲ್ಲಿ ವಿಷ್ಣು ಸಹಸ್ರನಾಮ, ನಾರಾಯಣ ಉಪನಿಷತ್ತುಗಳನ್ನು ಪಠಣ ಮಾಡಬೇಕು.

ವೀರಶೈವರು ಪುರುಷಸೂಕ್ತ ಹಾಗೂ ಶ್ರೀ ಸೂಕ್ತವನ್ನು ಪಠಣ ಮಾಡಬೇಕು. ಈ ಸಮಯದಲ್ಲಿ ವಿಷ್ಣುವಿನೊಂದಿಗೆ ಲಕ್ಷ್ಮೀದೇವಿಯನ್ನು ಪೂಜಿಸಿದರೆ ಧನಸಂಪತ್ತು ಪ್ರಾಪ್ತಿಯಾಗುತ್ತದೆ. ಈ ಧನುರ್ಮಾಸದಲ್ಲಿಯೇ ತಿರುಪತಿ ವೆಂಕಟೇಶನ ದರ್ಶನ ಮಾಡಿ, ನಂತರ ಕೊಲ್ಲಾಪೂರ ಮಹಾ ಲಕ್ಷ್ಮಿಯನ್ನು ಆರಾಧಿಸಿ, ಮಧ್ಯಾಹ್ನ ಹೆಸರುಬೇಳೆ ಪಾಯಸವನ್ನು ನೈವೇದ್ಯ ಮಾಡಬೇಕು.

ಮೈ ಕೊರೆಯುವ ಚಳಿಯಲ್ಲಿ ಮೈ ಕುಗ್ಗುವುದರಿಂದ ಈ ಪಾಯಸವನ್ನು ಸೇವಿಸಿದರೆ, ನಮ್ಮಲ್ಲಿ ಕೊಬ್ಬಿನಾಂಶವನ್ನು ಹೆಚ್ಚಿಸಲು ಇದು ಸಾತ್ವಿಕ ಆಹಾರವಾಗಿದೆ.

ಈ ಧನುರ್ಮಾಸದಲ್ಲಿ ತೀರ್ಥಕ್ಷೇತ್ರಗಳಲ್ಲಿ ಹರಿಯುವ ನದಿಯಲ್ಲಿ ಪುಣ್ಯಸ್ನಾನವನ್ನು ಮಾಡಿ, ಅಗಲಿದ ಪಿತೃಗಳಿಗೆ ತರ್ಪಣ ಬಿಡುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದಾಗಿದೆ. ಈ ವೇಳೆ ಬೆಳಗಿನ ಜಾವ ಬೇಗನೆ ಎದ್ದು ದೇಹವನ್ನು ದಂಡಿಸಿ, ಸ್ನಾನಮಾಡಿ ದೇವರನ್ನು ಪೂಜಿಸಿದರೆ, ನಮ್ಮ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ.

ಇದನ್ನು ಕೆಲವರು ಶೂನ್ಯ ಮಾಸ ಹಾಗೂ ಪುಷ್ಯಮಾಸ ಎಂದು ಕರೆಯುತ್ತಾರೆ. ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಈ ಧನುರ್ಮಾಸವು ಕೇವಲ ದೇವತಾರಾಧನೆಗೆ ಸಂಬಂಧಿಸಿದ ಹೋಮ, ಹವನ, ರುದ್ರಾಭಿಷೇಕ, ಪೂಜಾದಿಗಳಿಗೆ ಪವಿತ್ರವಾಗಿರುತ್ತದೆ. ಈ ಮಾಸದಲ್ಲಿ ಇವುಗಳನ್ನು ಮಾಡುವುದರಿಂದ ಹಾಗೂ ಪುರೋಹಿತರಿಂದ ಮಾಡಿಸುವುದರಿಂದ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

ಎಲ್ಲರೂ ಈ ಸಮಯದಲ್ಲಿ ದಾನ-ಧರ್ಮಗಳಲ್ಲಿ, ಜಪ-ತಪಗಳಲ್ಲಿ ಭಾಗಿಯಾಗಿ ಪುಣ್ಯಾತ್ಮರಾಗಿರಿ ಎಂಬುದು ನನ್ನ ಭಾವನೆ.

ಈ ಧನುರ್ಮಾಸವು ವ್ಯರ್ಥವಾಗದಿರಲಿ ಎಂದು ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಈ ಮಾಸದಲ್ಲಿ ದೇವರನ್ನು ಪೂಜಿಸಿದರೆ ಜ್ಞಾನ ಸಂಪತ್ತು, ಆಯುಷ್ಯ ಅಭಿವೃದ್ಧಿಯಾಗುತ್ತದೆ. ಸಂತಾನವಿಲ್ಲದವರು ಬೇಗನೆ ಎದ್ದು ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ವಿವಾಹ ಬೇಗನೇ ಕೂಡಿಬರದಿರುವ ವರ ಹಾಗೂ ಕನ್ಯೆಯರು ಪೂಜಿಸಿದರೆ ಕಂಕಣಭಾಗ್ಯ ಕೂಡಿಬರುತ್ತದೆ. ಅದರೊಂದಿಗೆ ದೇಶಕ್ಕೇ ಮೊದಲಾಗುವ ಮಕ್ಕಳು ಹುಟ್ಟುತ್ತಾರೆ ಎಂಬ ನಂಬಿಕೆ ಪ್ರತೀತಿಯಲ್ಲಿದೆ. ತಮ್ಮೆಲ್ಲರ ಮೇಲೆ ಆ ಭಗವಂತನ ಕೃಪೆ ಇರಲಿ ಎಂದು ಆಶಿಸುತ್ತೇವೆ.

— ವೇ.ಮೂ. ಶರಣಯ್ಯ ಶಾಸ್ತ್ರಿಗಳು
ಶಿವಪ್ಪಯ್ಯನಮಠ, ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!