ಬೆಳಗಾವಿ: ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲಶಿರಗೂರು ಬಳಿ ನಡೆದಿದೆ. ಈ ಅಪಘಾತದಲ್ಲಿ 5ನೇ ತರಗತಿ ವಿದ್ಯಾರ್ಥಿ ಅಮಿತ್ ಕಾಂಬಳೆ (11) ಲಾರಿ ಅಡಿಯಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದೆ.
ಘಟನೆಯಲ್ಲಿ ಅಂಜಲಿ ಕಾಂಬಳೆ (15) ಮತ್ತು ಅವಿನಾಶ ಕಾಂಬಳೆ (14) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಲಾರಿ ಪಲ್ಟಿಯಾದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕ್ರೇನ್ ಬಳಸಿ ಲಾರಿಯನ್ನು ಮೇಲೆತ್ತಿ ಕೆಳಗೆ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ.
ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿ, ತಿರುವಿನಲ್ಲಿ ನಿಯಂತ್ರಣ ತಪ್ಪಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಇನ್ನೂ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.



