ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ವಿವಾದಕ್ಕೆ ಸಿಲುಕಿದೆ. ರಿಲೀಸ್ಗೆ ಕೇವಲ ಮೂರು ದಿನ ಮಾತ್ರ ಉಳಿದಿದ್ದರೂ, ಸೆನ್ಸಾರ್ ಮಂಡಳಿ ಇನ್ನೂ ಸಿನಿಮಾಕ್ಕೆ ಪ್ರಮಾಣಪತ್ರ ನೀಡದೆ ವಿಳಂಬ ಮಾಡುತ್ತಿರುವುದು ಚಿತ್ರರಂಗದ ವಲಯದಲ್ಲಿ ಸಂಚಲನ ಮೂಡಿಸಿದೆ.
ಜನವರಿ 9ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಜನ ನಾಯಗನ್’ ಸಿನಿಮಾವನ್ನು ಡಿಸೆಂಬರ್ 19ರಂದೇ ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿತ್ತು. ವೀಕ್ಷಣೆಯ ವೇಳೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಕೆಲ ಸಂಭಾಷಣೆಗಳಿಗೆ ಮ್ಯೂಟ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಈ ಎಲ್ಲ ಬದಲಾವಣೆಗಳನ್ನು ಪೂರ್ಣಗೊಳಿಸಿ ತಂಡ ಮತ್ತೆ ಸಿನಿಮಾವನ್ನು ಮಂಡಳಿಗೆ ಸಲ್ಲಿಸಿದೆ. ಆದರೂ ತಿಂಗಳು ಕಳೆದರೂ ಸೆನ್ಸಾರ್ ಪತ್ರ ಸಿಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪೂಜಾ ಹೆಗ್ಡೆ ಹಾಗೂ ಮಮಿತಾ ಬೈಜು ನಟಿಸಿರುವ ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದು, ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಆಗಿದೆ. ಈ ಬಾರಿ ಕಥೆಯಲ್ಲಿ ರಾಜಕೀಯ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದ್ದು, ಇದೇ ವಿಷಯಕ್ಕೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು, ಸೆನ್ಸಾರ್ ಮಂಡಳಿಯ ನಡೆ ಉದ್ದೇಶಪೂರ್ವಕ ಹಾಗೂ ರಾಜಕೀಯ ಪ್ರೇರಿತ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜನವರಿ 6ರೊಳಗೆ ಪ್ರಮಾಣಪತ್ರ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ವಿಜಯ್ ಈ ಸಿನಿಮಾದ ಬಳಿಕ ಸಂಪೂರ್ಣವಾಗಿ ರಾಜಕೀಯಕ್ಕೆ ತೊಡಗಿಕೊಳ್ಳಲಿದ್ದು, ಈ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಸಕ್ರಿಯ ಪಾತ್ರವಹಿಸುವ ನಿರೀಕ್ಷೆಯಿದೆ. ಇಂತಹ ಸಮಯದಲ್ಲಿ ‘ಜನ ನಾಯಗನ್’ ಸಿನಿಮಾ ಎದುರಿಸುತ್ತಿರುವ ಸೆನ್ಸಾರ್ ಅಡೆತಡೆಗಳು ಇನ್ನಷ್ಟು ಚರ್ಚೆಗೆ ಗ್ರಾಸವಾಗಿವೆ.
ಇನ್ನು, ವಿಜಯ್ ಅವರ ಕೊನೆಯ ಸಿನಿಮಾ ರಿಮೇಕ್ ಆಗಿರುವುದರ ಬಗ್ಗೆ ಅಭಿಮಾನಿಗಳಲ್ಲೂ ಬೇಸರ ವ್ಯಕ್ತವಾಗಿದೆ. ರಿಲೀಸ್ಗೆ ಮುನ್ನವೇ ವಿವಾದಗಳಿಂದ ಸುತ್ತುವರಿದಿರುವ ‘ಜನ ನಾಯಗನ್’ ಈಗ ಕೋರ್ಟ್ ಮೆಟ್ಟಿಲೇರಬಹುದೇ ಎಂಬುದೇ ಮುಂದಿನ ಕುತೂಹಲ.



