ವಿಜಯ್ ಅಭಿಮಾನಿಗಳ ಬಹುಕಾಲದ ನಿರೀಕ್ಷೆಯಾಗಿದ್ದ ‘ಜನ ನಾಯಗನ್’ ಸಿನಿಮಾ ಇದೀಗ ಗಂಭೀರ ಸಂಕಷ್ಟದಲ್ಲಿ ಸಿಲುಕಿದೆ. ಜನವರಿ 9ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ, ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಇನ್ನೂ ಬಿಡುಗಡೆಯಾಗಿಲ್ಲ. ಇದರೊಂದಿಗೆ, ಈಗ ಚಿತ್ರ ತಂಡವೇ ಕೋರ್ಟ್ ಕೇಸ್ ಹಿಂಪಡೆಯಲು ಮುಂದಾಗಿದೆ ಎಂಬ ವರದಿ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸೆನ್ಸಾರ್ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೆವಿಎನ್ ಸಂಸ್ಥೆ ಸ್ಥಳೀಯ ಕೋರ್ಟ್‌ನಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಮೊರೆ ಹೋಗಿತ್ತು. ಆದರೆ, ಯಾವುದೇ ಕೋರ್ಟ್‌ನಿಂದಲೂ ಸಕಾರಾತ್ಮಕ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ, ಇದೀಗ ಹೊಸ ಮಾರ್ಗ ಹುಡುಕಲು ತಂಡ ನಿರ್ಧರಿಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಚಿತ್ರವನ್ನು ಪುನರ್ವಿಮರ್ಶಾ ಸಮಿತಿಗೆ ಕಳುಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ. ತಮಿಳುನಾಡು ಸೆನ್ಸಾರ್ ಮಂಡಳಿ ಚಿತ್ರದ ಕೆಲವು ದೃಶ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಅದೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಈ ಚಿತ್ರದ ಬಜೆಟ್ ಸುಮಾರು 500 ಕೋಟಿ ರೂಪಾಯಿ ಎಂಬುದೇ ಮತ್ತೊಂದು ಚರ್ಚೆಯ ವಿಷಯ. ಇಷ್ಟೊಂದು ದೊಡ್ಡ ಮೊತ್ತ ಹೂಡಿಕೆಯಾದ ಸಿನಿಮಾ ಇನ್ನೂ ಬಿಡುಗಡೆಯಾಗದೆ ಉಳಿದಿರುವುದು ನಿರ್ಮಾಪಕರಿಗೆ ಭಾರಿ ಹೊರೆ ತಂದಿದೆ.
ಮತ್ತೊಂದು ಮಹತ್ವದ ಅಂಶವೆಂದರೆ, ‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆ ಎಂಬ ಮಾಹಿತಿ. ಚಿತ್ರದ ಬಳಿಕ ಅವರು ರಾಜಕೀಯ ಪ್ರವೇಶಿಸುವುದಾಗಿ ಈಗಾಗಲೇ ಸುಳಿವು ನೀಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾಗೆ ಅಭಿಮಾನಿಗಳಲ್ಲಿ ಭಾರೀ ಹೈಪ್ ಇತ್ತು.
ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇದೀಗ ಎಲ್ಲರ ಕಣ್ಣುಗಳು ಸೆನ್ಸಾರ್ ಮಂಡಳಿ ಹಾಗೂ ಪುನರ್ವಿಮರ್ಶಾ ಸಮಿತಿಯ ತೀರ್ಮಾನಕ್ಕೆ ನೆಟ್ಟಿವೆ.



