ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಜ್ಯದಲ್ಲಿ ಹತ್ತಿ ಪ್ರಮುಖ ಬೆಳೆಯಾಗಿದ್ದು, ಹತ್ತಿ ಕೃಷಿ ಉತ್ಪನ್ನಕ್ಕೆ ಪ್ರಸ್ತುತ ಮಾರುಕಟ್ಟೆ ದರವು ಕಡಿಮೆಯಾಗಿರುವುದರಿಂದ ಕೇಂದ್ರ ಸರ್ಕಾರವು 2025-26ನೇ ಸಾಲಿಗೆ ಹತ್ತಿ ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆ ಯೋಜನೆಯಡಿ ಮಧ್ಯಮ ಎಳೆ ಹತ್ತಿಗೆ ರೂ. 7,710 ಮತ್ತು ಉದ್ದನೆಯ ಎಳೆ ಹತ್ತಿಗೆ ರೂ. 8,110 ದರವನ್ನು ಘೋಷಿಸಿದೆ. ರೈತರು ಇದರ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ಆರ್ಥಿಕ ಹಿತದೃಷ್ಟಿಯಿಂದ ಭಾರತೀಯ ಹತ್ತಿ ನಿಗಮದಿಂದ ಬೆಂಬಲ ಬೆಲೆ ಯೋಜನೆಯಡಿ ಸುಗಮವಾಗಿ ರೈತರ ನೋಂದಣಿಯನ್ನು ಡಿಜಿಟಲ್ ಮೂಲಕ ಕೈಗೊಳ್ಳುವ ಹಾಗೂ ನಿಗದಿತ ಸಮಯಕ್ಕೆ ಮಾರಾಟ ಮಾಡಿದ ಹತ್ತಿಯ ಪ್ರಮಾಣಕ್ಕನುಗುಣವಾಗಿ ಡಿ.ಬಿ.ಟಿ ಮೂಲಕ ರೈತರಿಗೆ ಹಣ ಪಾವತಿಯಾಗಲು ಅನುಕೂಲವಾಗುವಂತೆ ಕಪಾಸ್ ಕಿಸಾನ್ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಈ ಮೊಬೈಲ್ ಆ್ಯಪ್ ಮೂಲಕ ರೈತರು ಅಕ್ಟೋಬರ್ 31, 2025ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ರೈತರಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸುಗಮವಾಗಿ ಹತ್ತಿ ಮಾರಾಟ ಮಾಡಲು ಅನುಕೂಲವಾಗುವಂತೆ ರೈತರ ನೋಂದಣಿಗಾಗಿ ಇ-ಆಡಳಿತ ಇಲಾಖೆಯಿಂದ ಎಪಿಐ ಅನ್ನು ಈಗಾಗಲೇ ಭಾರತೀಯ ಹತ್ತಿ ನಿಗಮದೊಂದಿಗೆ ಜೋಡಣೆ ಮಾಡಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ನಿರ್ವಹಣೆಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿ, ಸಿಸಿಐ ಅಧಿಕಾರಿಗಳು, ಕೃಷಿ ಇಲಾಖೆ ಹಾಗೂ ಇತರೆ ಸ್ಥಳೀಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಯಾವುದೇ ತಾಂತ್ರಿಕ ದೋಷ, ನ್ಯೂನತೆಗಳಿಗೆ ಆಸ್ಪದ ನೀಡದೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಪ್ರಯೋಜನ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಮ್‌ಎಸ್‌ಪಿ) ಯೋಜನೆಯಡಿಯಲ್ಲಿ ಈಗಾಗಲೇ ರೈತರ ಸ್ವಯಂ ನೋಂದಣಿಯನ್ನು ಸೆ. 1ರಿಂದ ಆರಂಭಿಸಿದ್ದು, ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ಹತ್ತಿ ನಿಗಮ (ಸಿಸಿಐ) ಇವರಿಗೆ ಹತ್ತಿ ಉತ್ಪನ್ನ ಮಾರಾಟ ಮಾಡಲು ಕಪಾಸ್ ಕಿಸಾನ್ ಮೊಬೈಲ್ ಆ್ಯಪ್ ಮೂಲಕ ರೈತರು ಸ್ವಯಂ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.