ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಲಿಕೆಯಲ್ಲಿ ಗುಣಮಟ್ಟದ ಹಾಗೂ ಉತ್ಕೃಷ್ಟ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿಯವರು ಸಲಹೆ ನೀಡಿದರು.
ಬೆಂಗಳೂರಿನ ತಮ್ಮ ಕಛೇರಿಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಪ್ರಸ್ತುತ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿದರು. ಶಿಕ್ಷಕರ ನೇಮಕಾತಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ವ್ಯವಸ್ಥೆ, ದೈನಂದಿನ ಶೈಕ್ಷಣಿಕ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ತರಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಶಾಲಾ ಕಟ್ಟಡಗಳು, ಶಾಲಾ ಮೈದಾನಗಳು ಹಾನಿಗೊಳಗಾಗಿವೆ ಕೆಲ ಶಾಲೆಗಳಂತೂ ಸಂಪೂರ್ಣವಾಗಿ ನೀರಿನಲ್ಲಿಯೇ ಮುಳುಗಿ ಪಾಠ-ಪ್ರವಚನಕ್ಕೆ ತೊಂದರೆಯಾಗಿದೆ. ಈ ವಿಷಯದತ್ತ ಹೆಚ್ಚು ಗಮನಹರಿಸಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಮೂಲಭೂತ ಸೌಕರ್ಯಗಳನ್ನು ರಾಜ್ಯದ ಎಲ್ಲ ಶಾಲೆಗಳಿಗೆ ಒದಗಿಸಬೇಕು. ಮಕ್ಕಳ ಕಲಿಕೆಯ ವಿಷಯದಲ್ಲಿ ಸರಕಾರಿ ಹಾಗೂ ಖಾಸಗಿ ಎಂಬ ಬೇಧ-ಭಾವ ಮಾಡದೇ ಮಕ್ಕಳನ್ನು ಗಮದಲ್ಲಿಟ್ಟುಕೊಂಡು ಎಲ್ಲ ಅನುಕೂಲತೆಗಳನ್ನು ಕಲ್ಪಿಸಬೇಕು.
ಸಚಿವ ಮಧು ಬಂಗಾರಪ್ಪನವರು ಹೊರಟ್ಟಿ ಅವರು ನೀಡಿದ ಎಲ್ಲ ಸಲಹೆಗಳನ್ನು ಅತ್ಯಂತ ಸಮಾಧಾನದಿಂದ ಆಲಿಸಿ ತಮ್ಮ ಮಾರ್ಗದರ್ಶನದಲ್ಲಿಯೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶಕುಮಾರ ಸಿಂಗ್, ಸಭಾಪತಿ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ ವಾಳ್ವೇಕರ, ಎಚ್.ಡಿ. ಪಾಟೀಲ ಸೇರಿದಂತೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಅಧಿಕಾರಿ ವೃಂದ ಉಪಸ್ಥಿತರಿದ್ದರು.
ಮಾತೃ ಭಾಷೆಯಲ್ಲಿ ಭೋದಿಸುತ್ತಿರುವ ಶಾಲೆಗಳು ಕಡಿಮೆಯಾಗುತ್ತಿರುವುದರಿಂದ ಕನ್ನಡ ಭಾಷೆಗೆ ಕಂಟಕಗಳು ಎದುರಾಗುತ್ತಿವೆ. ಈ ವಿಷಯದತ್ತ ಸಚಿವರು ಹೆಚ್ಚು ಗಮನ ಹರಿಸುವುದು ಸೂಕ್ತ. ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಂಡು ಹೋಗಬೇಕು. ದಶಕಗಳಿಂದ ಕನ್ನಡ ಮಾಧ್ಯಮದಲ್ಲಿಯೇ ಶಾಲೆ ನಡೆಸುತ್ತ ಬಂದಿರುವ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಆ ಮೂಲಕ ಕನ್ನಡ ಭಾಷೆಯನ್ನು ಉಳಿಸುವುದರ ಜೊತೆಗೆ ಕನ್ನಡ ಕಟ್ಟುವ ಕೆಲಸವನ್ನು ಕೂಡ ಮಾಡಿದಂತಾಗುತ್ತದೆ ಎಂದರು.
Advertisement