ಚಾಮರಾಜನಗರ:- ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.
ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳ ಸಾನ್ನಿಧ್ಯದಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ನೇತೃತ್ವ ವಹಿಸಿದ್ದರು. 29 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ನಗದು, ನಾಣ್ಯ ಹಾಗೂ ಇ-ಹುಂಡಿಯ ಎಣಿಕೆ ನಡೆಯಿತು.
ಈ ಅವಧಿಯಲ್ಲಿ ಒಟ್ಟು ₹2.48 ಕೋಟಿ ನಗದು ಸಂಗ್ರಹವಾಗಿದ್ದು, 35 ಗ್ರಾಂ ಚಿನ್ನ, 1 ಕೆಜಿ 62 ಗ್ರಾಂ ಬೆಳ್ಳಿ ದೊರೆತಿದೆ. ಜೊತೆಗೆ 6 ವಿದೇಶಿ ನೋಟುಗಳು ಹಾಗೂ ₹2000 ಮುಖಬೆಲೆಯ 2 ನೋಟುಗಳು ಪತ್ತೆಯಾಗಿವೆ.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಭಾಗ್ಯಮ್ಮ, ಕುಪ್ತಾ, ಮರಿಸ್ವಾಮಿ ಕಾಗಲವಾಡಿ, ಮಹದೇವಪ್ಪ ಕೀಳನಪುರ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಪ್ರಾಧಿಕಾರದ ಹಣಕಾಸು ಹಾಗೂ ಲೆಕ್ಕಪತ್ರ ಸಲಹೆಗಾರ ಮಹದೇವು, ಉಪಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್., ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಮಹೇಶ್ ಚಂದ್ರ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.



