ಚಾಮರಾಜನಗರ: ಕರ್ನಾಟಕ–ತಮಿಳುನಾಡು ಗಡಿ ಪ್ರದೇಶದಲ್ಲಿ ಒಂಟಿ ಸಲಗದ ಉಪಟಳ ಮತ್ತೆ ಆತಂಕ ಮೂಡಿಸಿದೆ.
ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನ ಜಾವ ನಡೆದ ಘಟನೆಯಲ್ಲಿ, ಒಂಟಿ ಸಲಗವು ಸಂಚರಿಸುತ್ತಿದ್ದ ಕಾರನ್ನು ಅಟ್ಟಾಡಿಸಿರುವ ಘಟನೆ ವರದಿಯಾಗಿದೆ.
ಕಾಡಿನೊಳಗಿಂದ ಹೊರಬಂದ ಸಲಗವು ರಸ್ತೆ ಮೇಲೆ ಸಾಗುತ್ತಿದ್ದ ವಾಹನಗಳತ್ತ ದಾಳಿ ಮಾಡಲು ಯತ್ನಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯವು ಕರ್ನಾಟಕದ ಬಿಳಿಗಿರಿ ಟೈಗರ್ ರಿಸರ್ವ್‌ಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಈ ಗಡಿ ಭಾಗದಲ್ಲಿ ಒಂಟಿ ಸಲಗದ ಸಂಚಾರ ಆಗಾಗ ಕಂಡುಬರುತ್ತಿದೆ. ಇತ್ತೀಚಿನ ಘಟನೆಗಳಿಂದ ಸ್ಥಳೀಯರು ಹಾಗೂ ದೂರ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಒಂಟಿ ಸಲಗವು ಯಾವುದೇ ಕ್ಷಣದಲ್ಲಿ ಕರ್ನಾಟಕ ಗಡಿ ದಾಟಿ ಪ್ರವೇಶಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಗಡಿ ಪ್ರದೇಶದಲ್ಲಿ ಹೆಚ್ಚುವರಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.



