ಚಾಮರಾಜನಗರ:- ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಗುರುವಿನಪುರ ರಸ್ತೆಯಲ್ಲಿರುವ ರಾಮಪ್ಪ ಎಂಬುವರ ತೋಟದಲ್ಲಿದ್ದ ಹಸುವಿನ ಮೇಲೆ ಇಂದು ನಸುಕಿನ ಜಾವ ಹುಲಿ ದಾಳಿ ಮಾಡಿದೆ. ಕುತ್ತಿಗೆ ಹಾಗೂ ಹಿಂಭಾಗದಲ್ಲಿ ತಿಂದುಹಾಕಿದ ಪರಿಣಾಮ ಹಸು ಸಾವಿಗೀಡಾಗಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಫರ್ ವಲಯದ ಅರಣ್ಯ ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದರು. ಗ್ರಾಮದ ಸಮೀಪದಲ್ಲಿರುವ ಜಮೀನುಗಳಲ್ಲಿ ಹುಲಿ ದಾಳಿ ನಡೆಸಿ ರೈತರ ಸಾಕುಪ್ರಾಣಿಗಳನ್ನು ಕೊಲ್ಲುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಸಹಾ ಹುಲಿ ದಾಳಿ ನಡೆಸಿ ಹಾಲು ಕೊಡುತ್ತಿದ್ದ ಹಸುವನ್ನು ಕೊಂದುಹಾಕಿತ್ತು. ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ದಾಳಿ ನಡೆಸಿದೆ.
ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸಾರ್ವಜನಿಕರು ಒತ್ತಯಿಸಿದ್ದಾರೆ.



