ಬೆಂಗಳೂರು:- ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಧಾಮಗಳಲ್ಲಿ ಸೋಮವಾರದಿಂದ ಹುಲಿ ಗಣತಿ ಆರಂಭವಾಗಿದೆ.
ಮಾರ್ಚ್ 26ರವರೆಗೆ ನಡೆಯಲಿರುವ ಈ ಹುಲಿ ಗಣತಿ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮಾಂಸಾಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಕುರುಹು ಸಮೀಕ್ಷೆ, ಎರಡನೇ ಹಂತದಲ್ಲಿ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆ ಹಾಗೂ ಮೂರನೇ ಹಂತದಲ್ಲಿ ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆ ನಡೆಸಲಾಗುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಣತಿಗಾಗಿ 400ಕ್ಕೂ ಹೆಚ್ಚು ಸಿಬ್ಬಂದಿ, 500 ಟ್ರ್ಯಾಪ್ ಕ್ಯಾಮೆರಾಗಳು, 70ಕ್ಕೂ ಹೆಚ್ಚು ರೇಂಜ್ ಫೈಂಡರ್‌ಗಳು, 90 ಮೊಬೈಲ್ ಉಪಕರಣಗಳು ಮತ್ತು 50ಕ್ಕೂ ಹೆಚ್ಚು ಕಾಂಪಾಸ್‌ಗಳನ್ನು ಬಳಸಲಾಗುತ್ತಿದೆ.
ಗಣತಿ ಪೂರ್ಣಗೊಂಡ ಬಳಿಕ ವರದಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ನಂತರ ಅಧಿಕೃತವಾಗಿ ಹುಲಿ ಸಂಖ್ಯೆಯ ಅಂಕಿ-ಅಂಶಗಳನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರವ್ಯಾಪಿ ಹುಲಿ ಗಣತಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ಆರನೇ ಗಣತಿಯಾಗಿರುತ್ತದೆ. ಈ ಹಿಂದೆ 2006, 2010, 2014, 2018 ಮತ್ತು 2022ರಲ್ಲಿ ಹುಲಿ ಗಣತಿ ನಡೆಸಲಾಗಿತ್ತು. 2022ರ ಗಣತಿ ಪ್ರಕಾರ ಕರ್ನಾಟಕದಲ್ಲಿ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಹುಲಿ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನ ಪಡೆದಿತ್ತು.
ಈ ಬಾರಿ ರಾಜ್ಯದ ಪ್ರತಿಯೊಂದು ಅರಣ್ಯ ವ್ಯಾಪ್ತಿಯ 38 ಅರಣ್ಯ ವಿಭಾಗಗಳ ಗಸ್ತು ಪ್ರದೇಶಗಳಲ್ಲಿ ಗಣತಿ ನಡೆಯಲಿದೆ. ಈ ಉದ್ದೇಶಕ್ಕಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಐದು ಹುಲಿ ಮೀಸಲು ಪ್ರದೇಶಗಳ ಮುಂಚೂಣಿ ಸಿಬ್ಬಂದಿಗೆ ಹಾಗೂ ರಾಜ್ಯದ ಎಲ್ಲಾ 13 ಅರಣ್ಯ ವೃತ್ತಗಳ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.
ಜನವರಿ 5ರಿಂದ ಮೂರು ದಿನಗಳ ಕಾಲ ತಲಾ ಮೂವರು ಸದಸ್ಯರನ್ನೊಳಗೊಂಡ ತಂಡಗಳು ಪ್ರತಿದಿನ ಸುಮಾರು 5 ಕಿಲೋಮೀಟರ್‌ಗಳಷ್ಟು ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗಲಿದ್ದು, ಹುಲಿ, ಚಿರತೆ ಸೇರಿದಂತೆ ಇತರ ಮಾಂಸಾಹಾರಿ ಪ್ರಾಣಿಗಳು ಹಾಗೂ ಆನೆಗಳ ಪಗ್‌ಮಾರ್ಕ್‌ಗಳು, ಸ್ಕ್ಯಾಟ್ ಮತ್ತು ನೇರ ವೀಕ್ಷಣೆಗಳ ಮಾಹಿತಿಯನ್ನು ಸಂಗ್ರಹಿಸಲಿವೆ.



