ವಿಜಯಸಾಕ್ಷಿ ಸುದ್ದಿ, ಗದಗ : ಹೈಕೋರ್ಟ್ ಆದೇಶದ ಮೇರೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ 378ನೇ ಠರಾವು ಪಾಸ್ ಮಾಡಿ, ವಕಾರಸಾಲು ಲೀಸ್ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನಗರಸಭೆ ಸದಸ್ಯ ಚಂದ್ರು ತಡಸದ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕಾರಸಾಲು ಗುತ್ತಿಗೆ ಪಡೆದವರು 2017ರಲ್ಲಿಯೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅವರ ಅರ್ಜಿಯನ್ನು ಪುರಸ್ಕರಿಸಿ ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದೆ. ಆ ಠರಾವು ಕೋರ್ಟಿಗೆ ಸಲ್ಲಿಸಿ 2024 ಆಗಸ್ಟ್ 12ರಂದು ಗುತ್ತಿಗೆದಾರರು ಪ್ರಕರಣವನ್ನು ಹಿಂಪಡೆದಿದ್ದಾರೆ. ಅದರಂತೆ ವಕಾರಸಾಲು ಲೀಸ್ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ನಗರಸಭೆಯಲ್ಲಿ ಆಗಿರುವ ಠರಾವು ಅಸಲಿ. ಆದರೂ ಪ್ರತಿಪಕ್ಷದವರು ಇದೊಂದು ನಕಲಿ ಠರಾವು ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಠರಾವಿನಲ್ಲಿ ಮಾಡಿರುವ ಸಹಿ ನಕಲಿಯಾಗಿದೆ ಎಂದು ಪ್ರಭಾರ ಪೌರಾಯುಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಠರಾವು ಮತ್ತು ಠರಾವಿನ ದೃಢೀಕೃತ ಪ್ರತಿಯಲ್ಲಿ ಅವರೇ ಸಹಿ ಮಾಡಿ, ಈಗ ಸಹಿ ನನ್ನದಲ್ಲ ಎಂದು ದೂರು ನೀಡಿರುವುದು ಆಶ್ಚರ್ಯ ತರಿಸಿದೆ. ಈ ಬಗ್ಗೆ ಪೊಲೀಸ್ ತನಿಖೆಯ ನಂತರ ಸತ್ಯಾಸತ್ಯತೆ ಹೊರಬೀಳಲಿದೆ. ಅಲ್ಲಿಯವರೆಗೆ ಕಾದು ನೋಡುತ್ತೇವೆ ಎಂದರು.
ನಗರಸಭೆ ಬಿಜೆಪಿ ಆಡಳಿತ ಮಂಡಳಿ ನ್ಯಾಯಬದ್ಧವಾಗಿಯೇ ಲೀಸ್ ಅವಧಿಯನ್ನು ವಿಸ್ತರಿಸಿದೆ. ಕಾಂಗ್ರೆಸ್‌ನಂತೆ ಶೇ. 50ರಷ್ಟು ಮಾರಾಟ ಮಾಡುವ ದುಸ್ಸಾಹಸ ಮಾಡಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ವಾರ್ಷಿಕ 3500 ರೂ. ಬಾಡಿಗೆ ನಿಗದಿ ಮಾಡಲಾಗಿತ್ತು. ಸದ್ಯ ಅದನ್ನು 14 ಸಾವಿರ ರೂ.ಗೆ ಏರಿಕೆ ಮಾಡಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತವನ್ನು ಸಹಿಸದ ಕಾಂಗ್ರೆಸ್ ಈ ರೀತಿ ವದಂತಿ ಹರಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ನಗರಸಭೆಯಲ್ಲಿ ಆಗಿರುವ ಠರಾವು ಅಸಲಿಯಾಗಿದೆ. ಪ್ರಭಾರ ಪೌರಾಯುಕ್ತರಿಗೆ ಭಯ ಹುಟ್ಟಿಸಿ ದೂರು ನೀಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸದಸ್ಯರಾದ ವಿನಾಯಕ ಮಾನ್ವಿ, ನಾಗರಾಜ ತಳವಾರ, ವಿಜಯಲಕ್ಷ್ಮಿ ದಿಂಡೂರ, ರಮೇಶ ಸಜ್ಜಗಾರ ಮುಂತಾದವರಿದ್ದರು.
ಅಸಲಿಗೆ ವಕಾರಸಾಲು ಕಬಳಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. 2013ರಲ್ಲಿಯೇ ವಕಾರಸಾಲು ಆಸ್ತಿಯನ್ನು 50:50 ಅನುಪಾತದಲ್ಲಿ ಮಾರಾಟ ಮಾಡಲು ಮುಂದಾಗಿತ್ತು. ಆ ಬಗ್ಗೆ ಠರಾವು ಸಹ ಮಾಡಿತ್ತು. ಅಂದಿನ ಸಭೆಯಲ್ಲಿ ಕಾಂಗ್ರೆಸ್ಸಿನ ಎಂ.ಸಿ. ಶೇಖ್, ಮಂಜುನಾಥ ಪೂಜಾರ ಸೂಚಕರಾಗಿದ್ದರು. ಈಗ ಸರಕಾರದ ಮೂಲಕ ಪ್ರಾಧಿಕಾರ ರಚಿಸಿ, ವಕಾರಸಾಲು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಚಂದ್ರು ತಡಸದ ಆರೋಪಿಸಿದರು.