ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಮಾರನಬಸರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮುರುಘರಾಜೇಂದ್ರ ಶ್ರೀಮಠದ ಸರ್ವಧರ್ಮ ಸಮನ್ವಯ ಪೀಠದ ಕಟ್ಟಡವು ನಿಡಗುಂದಿಕೊಪ್ಪ ಶ್ರೀಮಠದ ಪೂಜ್ಯರಾದ ಚನ್ನಬಸವ ಶ್ರೀಗಳ ನೇತ್ರತ್ವದಲ್ಲಿ ನ.25ರಂದು ಉದ್ಘಾಟನೆಯಾಗಲಿದೆ ಎಂದು ಶಿವಮೊಗ್ಗ ಜಿಲ್ಲೆಯ ಹಿರೇಮಾಗಡಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಹೇಳಿದರು.
ಅವರು ಬುಧವಾರ ಮಾರನಬಸರಿ ಗ್ರಾಮದ ಶ್ರೀಮಠದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷಯ ಪ್ರಸ್ತಾಪಿಸಿದರು.
ಶ್ರೀ ಮಠದ ಉಧ್ಘಾಟನೆಯ ನಿಮಿತ್ತ ನ.21ರಿಂದ 25ರವರೆಗೆ ಐದು ದಿನಗಳ ಕಾಲ ಸಂಜೆ 7ರಿಂದ 9ರವರೆಗೆ ಶ್ರೀ ಗದಿಗೆಯ್ಯ ದೇವರ ವಿರಕ್ತಮಠ, ಬಟಕುರ್ಕಿ ಇವರಿಂದ ಧಾರ್ಮಿಕ ಪ್ರವಚನ ಕಾರ್ಯ ನಡೆಯಲಿದ್ದು, ಭಾವೈಕ್ಯತೆ, ಕೃಷಿ, ಹಾನಗಲ್ಲ ಕುಮಾರೇಶ್ವರ ಶ್ರೀಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನ.21ರಂದು ಧಾರ್ಮಿಕ ಕಾರ್ಯದ ಸಾನ್ನಿಧ್ಯವನ್ನು ಚನ್ನಬಸವ ಶ್ರೀಗಳು, ಸಮ್ಮುಖವನ್ನು ಶಿವಯೋಗಿ ದೇವರು ವಹಿಸುವರು. ಉಧ್ಘಾಟನೆಯನ್ನು ಮಾಜಿ ಶಾಸಕ ಕಳಕಪ್ಪ ಬಂಡಿ ನೆರವೇರಿಸುವರು. ಅಧ್ಯಕ್ಷತೆಯನ್ನು ವೀರಣ್ಣ ಮರಡಿ ವಹಿಸಲಿದ್ದು, ಶಿಕ್ಷಣದ ಕುರಿತು ಪ್ರೊ. ದೊಡ್ಡನಗೌಡ ಉಪನ್ಯಾಸ ನೀಡುವರು. ಸಂಯುಕ್ತ ಬಂಡಿ, ಉಮ್ಮಯ್ಯಜ್ಜ ಕಂಬಾಳಿಹಿರೇಮಠ, ಶಿವಕುಮಾರ ದಿಂಡೂರ, ಶಿವಪ್ಪ ಜಾಲಿಹಾಳ, ಈರಣ್ಣ ನಿಡಗುಂದಿ, ಕಾಶೀಮಸಾಬ ದೋಟಿಹಾಳ, ಭರತಕುಮಾರ ಹಾದಿಮನಿ ಉಪಸ್ಥಿತರಿರುವರು.
ನ.22ರ ಕೃಷಿ ಗೋಷ್ಠಿಯ ಸಾನ್ನಿಧ್ಯವನ್ನು ಚನ್ನಬಸವ ಶ್ರೀಗಳು, ಸಮ್ಮುಖವನ್ನು ಷಣ್ಮುಖಪ್ಪಜ್ಜನವರು ವಹಿಸುವರು. ಅಧ್ಯಕ್ಷತೆಯನ್ನು ಚಂದ್ರು ಮಾರನಬಸರಿ ವಹಿಸುವರು. ಕೃಷಿ ಕುರಿತು ಪ್ರೊ. ವಸಂತರಾವ ಗಾರ್ಗಿ ಉಪನ್ಯಾಸ ನೀಡುವರು. ಚನ್ನಯ್ಯಜ್ಜನವರು ಹಿರೇಮಠ, ಸಂಗಪ್ಪ ಹಾದಿಮನಿ, ಮರ್ತುಜಸಾಬ ಮೋತೆಖಾನ್, ಹನಮಂತಪ್ಪ ಹುಯಿಲಗೋಳ, ಅಲ್ಲಾಸಾಬ ಮೋತೆಖಾನ್ ಉಪಸ್ಥಿತರಿರುವರು.
ನ.23ರ ಭಾವೈಕ್ಯತಾ ಸಮಾರಂಭದ ಸಾನ್ನಿಧ್ಯವನ್ನು ಚನ್ನಬಸವ ಶ್ರೀಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ವಿಶ್ವನಾಥ ಗುರುಭಟ್ಟ ವೈದ್ಯ ವಹಿಸುವರು. ಭಾವೈಕ್ಯತೆ ಕುರಿತು ಪ್ರೊ. ಆರ್.ಕೆ. ಭಗವಾನ್ ಉಪನ್ಯಾಸ ನೀಡುವರು. ಶೇಖರಗೌಡ ಪಾಟೀಲ, ಮುತ್ತಪ್ಪ ಭಜಂತ್ರಿ, ಫಾತೀಮಾ ಸವಡಿ, ಉಮಾ ಚಿಗರಿ, ಚಂದ್ರವ್ವ ಬೆನಹಾಳ, ಯಲ್ಲಪ್ಪ ಡೊಳ್ಳಿನ ಉಪಸ್ಥಿತರಿರುವರು.
ನ.25ರಂದು ಬೆಳಿಗ್ಗೆ ಹೋಮ, ಹವನ, ವಾಸ್ತು ಶಾಂತಿ ನೆರವೇರುವುದು. ಧಾರ್ಮಿಕ ಕಾರ್ಯದಲ್ಲಿ ಶಾಸಕ ಜಿ.ಎಸ್. ಪಾಟೀಲ ದಂಪತಿ ಭಾಗಿಯಾಗುವರು. ಸಂಜೆ 7ಕ್ಕೆ ನಡೆಯುವ ಧರ್ಮಸಭೆಗೆ ಶಿರಹಟ್ಟಿ ಶ್ರೀಮಠದ ಫಕೀರ ದಿಂಗಾಲೇಶ್ವರ ಶ್ರೀಗಳು, ಹಾಲಕೆರೆ ಶ್ರೀಮಠದ ಮುಪ್ಪಿನ ಬಸವಲಿಂಗ ಶ್ರೀಗಳು, ಬಳಗಾನೂ ಶ್ರೀಮಠದ ಶಿವಶಾಂತವೀರ ಶರಣರು, ನಿಡಗುಂದಿಕೊಪ್ಪ ಶ್ರೀಮಠದ ಚನ್ನಬಸವ ಶ್ರೀಗಳು, ನರೆಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀಗಳು ಆಗಮಿಸಲಿದ್ದು, ಅದ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸುವರು. ಶಂಕರಗೌಡ ಪಾಟೀಲ, ಸುರೇಶ ಪಲ್ಲೇದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದ ಶ್ರೀಗಳು, ಇದೇ ಸಂಧರ್ಭದಲ್ಲಿ ಭೂ ದಾನಿಗಳಿಗೆ ಹಾಗೂ ದಾಸೋಹ ಸೇವೆ ಮಾಡಿದ ಭಕ್ತರಿಗೆ ಸನ್ಮಾನಿಸಲಾಗುವುದು ಎಂದರು.