ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕಾಗಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ, ವಿವಿಧ ಸಂಘಟನೆಗಳು, ಮಠಾಧೀಶರ ನೇತೃತ್ವದಲ್ಲಿ ಕಳೆದ 12 ದಿನಗಳಿಂದ ಲಕ್ಷ್ಮೇಶ್ವರದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿಯೇ ನ.28ರಂದು ವೀರರಾಣಿ ಕಿತ್ತೂರ ಚನ್ನಮ್ಮಾಜಿಯ ವಿಜಯೋತ್ಸವ, ಜಯಂತ್ಯುತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವವನ್ನು ಮಾಡಲಾಗುವುದು ಎಂದು ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಲಕ್ಷ್ಮೇಶ್ವರ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ತಿಳಿಸಿದರು.
ಅವರು ಈ ಕುರಿತು ರೈತ ಹೋರಾಟ ವೇದಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ನ.28 ರಂದು ಲಕ್ಷ್ಮೇಶ್ವರದಲ್ಲಿ ವಿಜೃಂಭಣೆಯ ಇಂದ ಕಿತ್ತೂರರಾಣಿ ಚನ್ನಮ್ಮನ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. 12 ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆಗಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿರುವುದರಿಂದ ಪೂರ್ವ ನಿರ್ಧಾರದಂತೆ ರೈತ ಹೋರಾಟದ ವೇದಿಕೆಯಲ್ಲಿಯೇ ಪಕ್ಷಾತೀತ, ಜಾತ್ಯಾತೀತವಾಗಿ ಆಚರಿಸಲು ಒಮ್ಮತದಿಂದ ನಿರ್ಧರಿಸಲಾಗಿದೆ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕಿತ್ತೂರರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನದ್ದು ತಾಯಿ–ಮಗನ ಸಂಬಂಧವಾಗಿದೆ. ಈ ಶ್ರೇಷ್ಠ ಹೋರಾಟಗಾರರನ್ನು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಮೆಕ್ಕೆಜೋಳದ ಬೆಂಬಲ ಬೆಲೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ. ಖರೀದಿ ಕೇಂದ್ರವೂ ಸಧ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂಬ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಹೋರಾಟದ ಪ್ರತೀಕವಾಗಿ ಚನ್ನಮ್ಮಾಜಿಯ ಸ್ವಾತಂತ್ರ್ಯ ಹೋರಾಟದ ವಿಜಯೋತ್ಸವವನ್ನು ವೇದಿಕೆಯಲ್ಲಿಯೇ ಆಚರಿಸಲಾಗುವುದು ಎಂದರು.
ಈ ವಿಶೇಷ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಮತ್ತು ಕೂಡಲದ ಶ್ರೀ ಜಯಬಸವ ಮೃತ್ಯುಂಜಯ ಜಗದ್ಗುರುಗಳು ವಹಿಸುವರು. ರೈತರ ಹೋರಾಟ ವೇದಿಕೆಗೆ ಬಂದು ಬೆಂಬಲ ನೀಡಿದ ಶಿರಹಟ್ಟಿ, ಬಾಲೇಹೊಸೂರ, ಮುಕ್ತಿಮಂದಿರ, ಗಂಜಿಗಟ್ಟಿ, ಹೂವಿನಶಿಗ್ಲಿ, ಕುಂದಗೋಳ, ಆದ್ರಳ್ಳಿ, ಬಟಗುರ್ಕಿ ಲಕ್ಷ್ಮೇಶ್ವರ ಶ್ರೀಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಈ ವೇಳೆ ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಚಂಬಣ್ಣ ಬಾಳಿಕಾಯಿ, ಹೊನ್ನಪ್ಪ ವಡ್ಡರ, ಶರಣು ಗೋಡಿ, ಸೋಮಣ್ಣ ಡಾಣಗಲ್, ನೀಲಪ್ಪ ಶರಸೂರಿ, ಸುರೇಶ ಹಟ್ಟಿ, ಬಸಣ್ಣ ಹಂಜಿ, ಮುರಘೇಂದ್ರಸ್ವಾಮಿ ಹಿರೇಮಠ, ರಾಜು ಗುಡಗೇರಿ, ಲಾಲಪ್ಪ ಲಮಾಣಿ, ಮಂಜು ಮುಳಗುಂದ ಮುಂತಾದವರಿದ್ದರು.
ಸಚಿವರಾದ ಹೆಚ್.ಕೆ. ಪಾಟೀಲ, ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಸಿ. ಪಾಟೀಲ ಸೇರಿ ಅನೇಕ ರಾಜಕೀಯ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ರೈತರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಸರ್ವ ಸಮಾಜದ ಬಂಧುಗಳು, ರೈತರ ಹೋರಾಟಗಾರರು ಸ್ವಯಂಪ್ರೇರಿತವಾಗಿ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮಂಜುನಾಥ ಮಾಗಡಿ ಹೇಳಿದರು.



