ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಡಿಸೆಂಬರ್ 8ರಂದು ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ 13 ಗಂಟೆಗಳ ಅಖಂಡ ಹನುಮಾನ್ ಚಾಲೀಸಾ ಪಠಣೆ ಜರುಗಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಾ. ಜಿ.ಕೆ. ಕಾಳೆ ಮತ್ತು ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರಗಳ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹನುಮಾನ್ ಚಾಲೀಸಾ ಪಠಣೆಯ ಕಾರ್ಯಕ್ರಮಗಳು ಡಿ.6ರಿಂದ ಪ್ರಾರಂಭಗೊಳ್ಳಲಿವೆ. ಡಿ.೬ರಂದು ಶ್ರೀ ಮಾರುತಿ, ಶ್ರೀ ದತ್ತಾತ್ರೇಯ, ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರು, ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರು ಮತ್ತು ಪ.ಪೂ. ಶ್ರೀ ದತ್ತಾವಧೂತ ಮಹಾರಾಜರ ಭವ್ಯ ಶೋಭಾಯಾತ್ರೆ ಜರುಗಲಿದೆ. ಮಾಜಿ ಶಾಸಕ ಡಿ.ಆರ್. ಪಾಟೀಲ ಮತ್ತು ರೋಣ ಶಾಸಕ ಜಿ.ಎಸ್. ಪಾಟೀಲ, ಸಿದ್ದಣ್ಣ ಬಂಡಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಡಿ. 7ರಂದು ಬೆಳಿಗ್ಗೆ 9ಕ್ಕೆ ಶ್ರೀ ದತ್ತ ಯಾಗ ಪ್ರಾರಂಭವಾಗುತ್ತದೆ. 12ಕ್ಕೆ ಪೂರ್ಣಾಹುತಿ ನಡೆಯಲಿದ್ದು, ನಂತರ ಮಧ್ಯಾಹ್ನ 12.30ಕ್ಕೆ ಜರುಗುವ ಸಭೆಯಲ್ಲಿ ಗಣ್ಯರಿಗೆ ಗೌರವ ಶ್ರೀರಕ್ಷೆ ಮತ್ತು 75 ವರ್ಷದ ಮಹನೀಯರುಗಳಿಗೆ ಪೂಜ್ಯ ದತ್ತಾವಧೂತರಿಂದ ಆಶೀರ್ವಾದಪೂರ್ವಕ ಸನ್ಮಾನ, ನಂತರ ಪೂಜ್ಯರಿಂದ ಆಶೀರ್ವಚನ ಜರುಗಲಿದೆ. ಸಂಜೆ 5ಕ್ಕೆ ಗಜೇಂದ್ರಗಡದ ಶ್ರೀ ಜಗನ್ನಾಥದಾಸ ಭಜನಾ ಮಂಡಳಿಯವರಿAದ ಭಜನೆ, 6ಕ್ಕೆ ಆಕಾಶವಾಣಿ, ದೂರದರ್ಶನ ಕಲಾವಿದ ವೆಂಕಟೇಶ ಕುಲಕರ್ಣಿ ಮತ್ತು ಸಂಗೀತಗಾರ್ತಿ ರಾಜಶ್ರೀ ಅರುಣ ಕುಲಕರ್ಣಿಯವರಿಂದ ಸಂಗೀತ ಸೇವೆ ಜರುಗಲಿದೆ.
ಡಿ.೮ರಂದು ಬೆಳಿಗ್ಗೆ 5ಕ್ಕೆ ಕಾಕಡಾರತಿ, ಅಖಂಡ 13 ತಾಸುಗಳ ಹನುಮಾನ್ ಚಾಲೀಸಾ ಪಠಣದ ಸಂಕಲ್ಪ ನಡೆಯಲಿದ್ದು, ಬೆಳಿಗ್ಗೆ 7ರಿಂದ ರಾತ್ರಿ ೮ರವರೆಗೆ ಪಠಣ ನಡೆಯುತ್ತದೆ. ಸದ್ಭಕ್ತರೆಲ್ಲರೂ ಈ ಹನುಮಾನ್ ಚಾಲೀಸಾ ಪಠಣದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಜಿ.ಕೆ. ಕಾಳೆ ಮತ್ತು ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಜಂಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.