ವಿಜಯಸಾಕ್ಷಿ ಸುದ್ದಿ, ಗದಗ: ಲೋಕ ಕಲ್ಯಾಣ ಹಾಗೂ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮಾ. 8 ಮತ್ತು 9ರಂದು ನಗರದ ಶ್ರೀ ಶಂಕರಮಠದಲ್ಲಿ ಅಖಂಡ ಶ್ರೀ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾಹಿತಿ ನೀಡಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸಂಭಾಪುರ ರಸ್ತೆಯ ಶಂಕರಮಠದಲ್ಲಿ ನಿರಂತರ 11 ಗಂಟೆಗಳ ಕಾಲ ಅಖಂಡ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಾ. 8ರಂದು ಸಂಜೆ 5 ಗಂಟೆಗೆ ಶ್ರೀಕ್ಷೇತ್ರ ಹೆಬ್ಬಳ್ಳಿಯ ಚೈತನ್ಯಾಶ್ರಮದಿಂದ ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ದಿವ್ಯ ಪಾದುಕೆಗಳೊಂದಿಗೆ, ಮಾರುತಿ ದೇವರ ಮೂರ್ತಿ ಹಾಗೂ ದತ್ತಾವಧೂತ ಗುರುಗಳ ಆಗಮನವನ್ನು ಶಂಕರ ಮಠದವರೆಗೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಮಾ. 9ರಂದು ಕಾಕಡಾರತಿ, ಪಂಚಪದಿ ಭಜನೆಯ ತರುವಾಯ ನಿರಂತರ 11 ಗಂಟೆಗಳ ಕಾಲ ಹನುಮಾನ್ ಚಾಲೀಸಾ ಪಠಣ ನಡೆಯಲಿದೆ. ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಸದಸ್ಯರು ಹಾಗೂ ಜಿಲ್ಲೆಯ ಸಮಸ್ತ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ಬ್ರಾಹ್ಮಣ ಸಮಾಜದ ಮುಖಂಡರಾದ ಅನಿಲ ತೆಂಬದಮನಿ, ಸಂಜಯ ತೆಂಬದಮನಿ, ಕೃಷ್ಣಾಜಿ ನಾಡಿಗೇರ, ಕಲಾವತಿ ಅಲುಬುರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.