ವಿಜಯಸಾಕ್ಷಿ ಸುದ್ದಿ, ಗದಗ : ಅಂಗವಿಕಲ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ ಗದಗ ವತಿಯಿಂದ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ-ಸಲಕರಣೆ ವಿತರಣೆ ಶಿಬಿರವನ್ನು ಗದಗ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು. ಸದರಿ ಕ್ಯಾಂಪ್‌ನಲ್ಲಿ ಸುಮಾರು 1500 ಜನ ಅಂಗವಿಕಲರು ಪಾಲ್ಗೊಂಡಿದ್ದರು. ಆದರೆ ಶಿಬಿರದಲ್ಲಿ ಯಾವುದೇ ತರಹದ ಆಸನದ ವ್ಯವಸ್ಥೆ, ಕುಡಿಯುವ ನೀರು, ವ್ಹೀಲ್ ಚೇರ್ ವ್ಯವಸ್ಥೆ ಇಲ್ಲದೆ ಫಲಾನುಭವಿಗಳು ಮತ್ತು ಅವರ ಪಾಲಕರಿಗೆ ಅನಾನೂಕಲವಾಗಿತ್ತು.
ಸದರಿ ಅವ್ಯವಸ್ಥೆಯ ಬಗ್ಗೆ ಕರ್ನಾಟಕ ರೈತ ವಿಕಾಸ ಸಂಘ ಈ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಂಗನಗೌಡ ಅಮಾತಿಗೌಡ್ರ, ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಸಿರಾಜ್ ಲಕ್ಕುಂಡಿ, ಉತ್ತರ ಕರ್ನಾಟಕ ವಿಭಾಗದ ಕಾರ್ಯದರ್ಶಿ ಶರಣಪ್ಪ ಎಸ್.ಗೊಳಗೊಳಕಿ, ಉತ್ತರ ಕರ್ನಾಟಕ ವಿಭಾಗದ ಮಹಿಳಾ ಅಧ್ಯಕ್ಷರಾದ ಜ್ಯೋತಿ ಕುಲಕರ್ಣಿ, ಗದಗ ಜಿಲ್ಲಾ ಅಧ್ಯಕ್ಷ ಹಾಜಿಮೀಯಾ ಹಾಜಿ, ಉಪಾಧ್ಯಕ್ಷ ನೌಶಾದ ಬಳ್ಳಾರಿ, ಗದಗ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಲಕ್ಷ್ಮಿ ಕಾಶಿಮಠ, ಕೊಪ್ಪಳ ಅಧ್ಯಕ್ಷ ಶರಣಪ್ಪ ವಡ್ಡರ ಮುಂತಾದವರು ಸಂಬಂಧಪಟ್ಟ ಇಲಾಖೆಯಿಂದ ಅಲ್ಲಿನ ಅಂಗವಿಕಲರಿಗೆ ಹಾಗೂ ಪಾಲಕರಿಗೆ ಕ್ಯಾಂಪ್‌ನಲ್ಲಿ ಆಸನ, ಕುಡಿಯುವ ನೀರಿನ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಂಗನಗೌಡ ಅಮಾತಿಗೌಡ್ರ, ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಸಿರಾಜ್ ಲಕ್ಕುಂಡಿ ಈ ಅಂಗವಿಕಲರ ಕ್ಯಾಂಪ್‌ನ ಅವ್ಯವಸ್ಥೆಯ ಬಗ್ಗೆ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಇಂತಹ ಶಿಬಿರ ಆಯೋಜನೆ ಪೂರ್ವದಲ್ಲಿ ಎಲ್ಲ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸೊರಟೂರ ಗ್ರಾಮದ ಮೌನೇಶ ಮರಾಠ ಹಾಗೂ ಸ್ನೇಹಿತರು ಸಂಘಕ್ಕೆ ಕೈಜೋಡಿಸಿ ನೆರವಾದರು.